ಅಮಲಿನಲ್ಲಿ ಆಂಬುಲೆನ್ಸ್ ಕರೆಸಿ ಅವಾಂತರ!

9-67ddabada4e51
Published on

ಶೃಂಗೇರಿ: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ 108 ಆಂಬುಲೆನ್ಸ್​ಗೆ ಕರೆ ಮಾಡಿ ಬೇಸ್ತು ಬೀಳಿಸಿದ ಘಟನೆ ಗುರುವಾರ ರಾತ್ರಿ ಶೃಂಗೇರಿಯಲ್ಲಿ ನಡೆದಿದೆ.

ಪಟ್ಟಣದ ಬಸ್​ನಿಲ್ದಾಣದಲ್ಲಿ ದೊಡ್ಡ ಗಲಾಟೆ ಆಗುತ್ತಿದೆ, ಬೇಗ ಬನ್ನಿ. ಹೊಡೆದಾಟದಿಂದ ಹಲವರಿಗೆ ಪೆಟ್ಟಾಗಿದೆ ಎಂದು ಹೇಳಿದ್ದಾನೆ. ಶೃಂಗೇರಿ ಹಾಗೂ ಕೊಪ್ಪದ 108 ಆಂಬುಲೆನ್ಸ್​ಗಳು ರೋಗಿಗಳನ್ನು ಬಿಟ್ಟುಬರುವ ಸಲುವಾಗಿ 45 ಕಿ.ಮೀ ದೂರಕ್ಕೆ ಹೋಗಿದ್ದರಿಂದ ಬಾಳೆಹೊನ್ನೂರಿನ ಆಂಬುಲೆನ್ಸ್ ಸ್ಥಳಕ್ಕೆ ಧಾವಿಸಿದೆ.

ಆದರೆ ಬಸ್ ನಿಲ್ದಾಣದಲ್ಲಿ ಯಾವ ಗಲಾಟೆಯೂ ನಡೆದಿರಲಿಲ್ಲ. ಇಷ್ಟೆಲ್ಲ ಆದ ನಂತರ ಸ್ಥಳಕ್ಕೆ ಆಗಮಿಸಿದ 112 ಪೋಲಿಸರು, ಪೋನ್ ಮಾಡಿದವನಿಗೆ ಕರೆ ಮಾಡಿದರೆ ‘ನಾನು ಭೂಮಿ ಮೇಲೆ, ಆಕಾಶದ ಕೆಳಗೆ ಇದ್ದೇನೆ. ತಾಕತ್ತಿದ್ದರೆ ನನ್ನನ್ನು ಹಿಡಿಯಿರಿ’ ಎಂದು ಸವಾಲು ಹಾಕಿದ್ದಾನೆ. ಸುಮಾರು ಅರ್ಧ ಗಂಟೆ ಆತನನ್ನು ಹುಡುಕಾಡಿದರೂ ಸಿಗಲಿಲ್ಲ. ಮತ್ತೆ ಕರೆ ಮಾಡಿ ಮೊಬೈಲ್​ನ ಜಾಡು ಹಿಡಿದು ಹೊರಟ ಪೊಲೀಸರಿಗೆ ಆತ ವೈನ್​ಶಾಪ್​ನಲ್ಲಿ ಸಿಕ್ಕಿಬಿದ್ದಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net