

ನವದೆಹಲಿ: ಯೂಟ್ಯೂಬ್ ವ್ಲಾಗರ್‌ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅನೇಕ ಜನರು ಯೂಟ್ಯೂಬ್ ಅನ್ನು ಹಣ ಸಂಪಾದಿಸುವ ಉತ್ತಮ ವೇದಿಕೆಯನ್ನಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ತಾವು ಹೋದ ಕಡೆಯಲ್ಲೆಲ್ಲ ಮೊಬೈಲ್ ಫೋನ್ ಅಥವಾ ಕ್ಯಾಮೆರಾವನ್ನು ತೆಗೆದುಕೊಂಡು ಹೋಗಿ ವಿಡಿಯೋ ಸೆರೆಹಿಡಿದು ತಮ್ಮ ಯೂಟ್ಯೂಬ್ನಲ್ಲಿ ಹಂಚಿಕೊಳ್ಳುತ್ತಾರೆ. ಆದರೆ, ಕೆಲವೊಮ್ಮೆ ವ್ಲಾಗರ್‌ಗಳ ವರ್ತನೆಯಿಂದ ಎಡವಟ್ಟುಗಳಾಗುತ್ತವೆ ಎಂಬುದಕ್ಕೆ ಈ ಘಟನೆ ತಾಜಾ ಉದಾಹರಣೆಯಾಗಿದೆ.
ಯುವಕನೊಬ್ಬ ವ್ಲಾಗ್ ಮಾಡಲು ಗ್ರಾಮವೊಂದಕ್ಕೆ ಬಂದಾಗ, ಆತನ ಬೆನ್ನ ಹಿಂದೆ ಇದ್ದ ಭಾರವಾದ ಬ್ಯಾಗ್ ನೋಡಿ, ಆತ ಭಯೋತ್ಪಾದಕನೆಂದು ತಪ್ಪಾಗಿ ಭಾವಿಸಿದ ಗ್ರಾಮಸ್ಥರು, ಹೆದರಿ ಪೊಲೀಸರಿಗೆ ಕರೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸೂರಜ್ ಶರ್ಮಾ ಎಂಬ ವ್ಲಾಗರ್ ಗ್ರಾಮವೊಂದಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಆತನ ಬೆನ್ನಿನಲ್ಲಿದ್ದ ಭಾರವಾದ ಬ್ಯಾಗ್ ನೋಡಿ ಆತಂಕಗೊಂಡರು. ಬ್ಯಾಗ್ನಲ್ಲಿ ಏನಿದೆ ತೋರಿಸು ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ಆದರೆ, ಯುವಕ ಬ್ಯಾಗ್ ತೆರೆಯಲು ನಿರಾಕರಿಸಿದಾಗ ಆತನನ್ನು ಭಯೋತ್ಪಾದಕ ಎಂದು ಭಾವಿಸಿ, ಭಯದಿಂದ ಪೊಲೀಸರಿಗೆ ಕರೆ ಮಾಡಿದರು. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಘರ್ ಕೆ ಕಲೇಶ್ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಗ್ರಾಮಸ್ಥರು ಮತ್ತು ವ್ಲಾಗರ್ ನಡುವೆ ಮಾತಿನ ಚಕಮಕಿ ನಡೆಸುತ್ತಿರುವುದನ್ನು ಕಾಣಬಹುದು. ಬ್ಯಾಗ್ ತೆರೆದು ನಿಮಗೆಲ್ಲರಿಗೂ ತೋರಿಸಿದರೆ, ಎಲ್ಲ ವಸ್ತುಗಳನ್ನು ಮತ್ತೆ ಬ್ಯಾಗ್ ಒಳಗಡೆ ಹಾಕಲು ಬಹಳ ಸಮಯ ಹಿಡಿಯುತ್ತದೆ ಬೇಕಾದರೆ, ಪೋಲೀಸರಿಗೆ ಕರೆ ಮಾಡಬಹುದು ಎಂದು ಯುವಕ ಹೇಳಿರುವುದು ವಿಡಿಯೋದಲ್ಲಿದೆ. ಅಲ್ಲದೆ, ಆ ಯುವಕ ತನ್ನ YouTube ಮತ್ತು Instagram ಖಾತೆಯನ್ನು ಸಹ ತೋರಿಸಿದ್ದಾನೆ. ಇದ್ಯಾವುದನ್ನು ನಂಬದ ಗ್ರಾಮಸ್ಥರು, ಪೊಲೀಸರಿಗೆ ಕರೆ ಮಾಡಿ ದೂರು ನೀಡಿದರು.
ಸೆಪ್ಟೆಂಬರ್ 7ರಂದು ಶೇರ್ ಆಗಿರುವ ಈ ವಿಡಿಯೋ ಈವರೆಗೂ 1 ಮಿಲಿಯನ್ಗೂ ಹೆಚ್ಚು ವೀಕ್ಷಣೆ ಕಂಡಿದ್ದು, ನೂರಾರು ಕಾಮೆಂಟ್ಗಳು ಬಂದಿವೆ. ನೀವು ಹಳ್ಳಿಯ ಜೀವನದ ಬಗ್ಗೆ ವ್ಲಾಗ್ ಮಾಡಲು ಬಯಸಿದ್ರಿ ಆದರೆ, ಈಗ ನೀವೀಗ ತುಂಬಾ ವೈರಲ್ ಆಗಿ 'ಮೋಸ್ಟ್ ವಾಂಟೆಡ್' ಲಿಸ್ಟ್‌ನಲ್ಲಿದ್ದೀರಿ ಎಂದು ನೆಟ್ಟಿಗನೊಬ್ಬ ನಗೆಚಟಾಕಿ ಹಾರಿಸಿದ್ದಾರೆ. ಪರಿಸ್ಥಿತಿಯನ್ನು ಯುವಕ ಚೆನ್ನಾಗಿ ನಿಭಾಯಿಸಿದನು ಎಂದು ಮತ್ತೊಬ್ಬ ನೆಟ್ಟಿಗ ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)