

ಬೆಂಗಳೂರು: ಜಾತಿಗಣತಿ ವರದಿಯ ಅಂಕಿ-ಅಂಶಗಳ ಬಗ್ಗೆ ಚರ್ಚಿಸಲು ರಾಜ್ಯ ಸರ್ಕಾರ ಕೂಡಲೇ ಸರ್ವಪಕ್ಷ ಸಭೆ ಸಭೆ ಕರೆಯಬೇಕು(Call an all-party meeting to discuss the caste census report)ಎಂದು ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಆಗ್ರಹಿಸಿದರು.
ಜೆ.ಪಿ.ಭವನದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಎಲ್ಲ ಸಮುದಾಯಗಳ ಸ್ವಾಮೀಜಿಗಳು, ಮುಖಂಡರು, ಬುದ್ದಿಜೀವಿಗಳನ್ನು ಆಹ್ವಾನಿಸಿ ಸಮಾಲೋಚನೆ ನಡೆಸಬೇಕು ಹಾಗೂ ಇದಕ್ಕೆ ಸರ್ವಸಮ್ಮತ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.
ಗಣತಿಗೆ ಜೆಡಿಎಸ್ ವಿರೋಧ ಮಾಡುತ್ತಿಲ್ಲ. ಆದರೆ, ಸಮೀಕ್ಷೆ ಕ್ರಮಬದ್ಧವಾಗಿ ಇಲ್ಲ. ಸೋರಿಕೆ ಆಗಿರುವ ಅಂಕಿ-ಅಂಶಗಳ ಸತ್ಯಾಸತ್ಯತೆ ಬಗ್ಗೆ ಪ್ರಶ್ನೆ ಮಾಡಿದ್ದೇವೆ ಹಾಗೂ ಆ ಅಂಕಿ ಅಂಶಗಳು ಸತ್ಯಕ್ಕೆ ದೂರವಾಗಿವೆ ಎಂದಷ್ಟೇ ಹೇಳಿದ್ದೇವೆ ಎಂದು ಹೇಳಿದರು.
ಗಣತಿ ಅಂಕಿ-ಅಂಶಗಳು ಸೋರಿಕೆ ಆಗಿವೆ. ಸೋರಿಕೆ ಆಗಿದ್ದು ಹೇಗೆ? ಯಾರು ಮಾಡಿದ್ದು? ಇದರ ಉದ್ದೇಶ ಏನು? ಸರ್ಕಾರ ಮಾಡಿದ್ದು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡಿದ್ದು. ಬಿಡುಗಡೆ ಆಗಿದ್ದು ಜಾತಿ ಅಂಕಿ-ಅಂಶ. ಯಾವ ಸಮಾಜ ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದೆ ಉಳಿದಿದೆ ಎಂಬ ಮಾಹಿತಿಯೇ ಇಲ್ಲ. ಅದಕ್ಕೆ ಸಂಬಂಧಪಟ್ಟ ಅಂಕಿ ಅಂಶಗಳನ್ನು ಯಾಕೆ ಸೋರಿಕೆ ಮಾಡಲಿಲ್ಲ? ಸುಮ್ನೆ ನೋಡೋಣ.. ಬೆಂಕಿ ಬಿದ್ರೆ ಬೀಳಲಿ ಎನ್ನುವ ಮನಸ್ಥಿತಿ ಇವರದು ಎಂದು ವಾಗ್ದಾಳಿ ನಡೆಸಿದರು.
ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಈಗ ಜಾತಿಗಣತಿ ಆಗಿದೆ. ಅದು ಹೇಗೆ? ಮುಸ್ಲಿಂಮರಲ್ಲಿ ಶಿಯಾ, ಸುನ್ನಿ ಸೇರಿ 60 ಉಪ ಜಾತಿ ಬರುತ್ತವೆ. ಕ್ರಿಶ್ಚಿಯನ್ನರ ಲ್ಲಿ ಅನೇಕ ಉಪ ಜಾತಿ ಬರುತ್ತವೆ. ಅವರನ್ನು ಒಗ್ಗೂಡಿಸಿ ಕೆಲ ಜಾತಿಗಳನ್ನು ಮಾತ್ರ ಛಿದ್ರ ಮಾಡಿದ್ದಾರೆ. ಇದು ಯಾವ ರೀತಿಯ ಸಾಮಾಜಿಕ ನ್ಯಾಯ? ಎಂದು ಪ್ರಶ್ನಿಸಿದರು
ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ಖಾಲಿ ಸಿಲಿಂಡರ್ ಎತ್ತಿಕೊಂಡು ಪೋಸ್ ಕೊಟ್ಟರಲ್ಲಾ.. ಖಾಲಿ ಸಿಲಿಂಡರ್ ಎತ್ತೋಕೆ ನೀವೇ ಬೇಕಾ ಶಿವಕುಮಾರಣ್ಣ? ಭಾರವನ್ನೆಲ್ಲ ಜನರ ಮೇಲೆ ಹಾಕಿ ನೀವು ಮಾತ್ರ ಖಾಲಿ ಸಿಲಿಂಡರ್ ಎತ್ತುತ್ತಿರಿ! ಅದಕ್ಕೆ ನೀವೇ ಬೇಕಾ? ಎಂದು ವ್ಯಂಗ್ಯವಾಡಿದರು.
ಇದನ್ನು ಗಣತಿ ವರದಿ ಅನ್ನಬೇಕಾ? ಎಂದು ‘ವಿಜಯವಾಣಿ’ ವರದಿಯ ಪ್ರತಿಯನ್ನು ಕೈಯ್ಯಲ್ಲಿ ಹಿಡಿದು ತೋರಿಸಿದ ನಿಖಿಲ್ ಕುಮಾರಸ್ವಾಮಿ, ಅಮಾಯಕರ ಕೈಯಲ್ಲಿ ಪೆನ್ನು ಪೇಪರ್ ಕೊಟ್ಟು ಗಣತಿ ವರದಿ ಬರೆಸಿದ್ದೀರಿ. ಹತ್ತು ವರ್ಷದಲ್ಲಿ ಆಗದೇ ಇರುವ ವರದಿ ಅರವತ್ತು ದಿನದಲ್ಲಿ ಸಿದ್ಧವಾಗಿದೆ. ರಾಕೆಟ್ ವೇಗದಲ್ಲಿ, ಅದೂ ಬೆಳಕು, ಗಾಳಿಗಿಂತ ವೇಗದಲ್ಲಿ ವರದಿ ತಯಾರಾಗಿದೆ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಡಾ.ಕೆ. ಅನ್ನದಾನಿ, ಕೆ.ಎ.ತಿಪ್ಪೇಸ್ವಾಮಿ, ಚೌಡರೆಡ್ಡಿ ತೂಪಲ್ಲಿ, ವಕ್ತಾರರಾದ ಎಚ್.ಎನ್. ದೇವರಾಜು, ನರಸಿಂಹಮೂರ್ತಿ, ರಾಜೂಗೌಡ ಮುಂತಾದ ಮುಖಂಡರು ಉಪಸ್ಥಿತರಿದ್ದರು.