

ಬೆಂಗಳೂರು: ಕರೊನಾ ಮೂರನೇ ಅಲೆ ಸಿದ್ಧತೆಗಾಗಿ ಬಹುಕೋಟಿ ಮೊತ್ತದಲ್ಲಿ ಉಪಕರಣ ಖರೀದಿ, ಕೇಂದ್ರ ಸರ್ಕಾರದ ಪ್ರಾಯೋಜಿತ ಜಲಜೀವನ್ ಮಿಷನ್ ಯೋಜನೆ ಅಡಿ ಯಾದಗಿರಿ ಜಿಲ್ಲೆಯ ಎಲ್ಲ ಗ್ರಾಮೀಣ ಜನವಸತಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವುದು ಮತ್ತು ದಕ್ಷಿಣ ಜಿಲ್ಲೆಯ 715 ಜನ ವಸತಿಗಳಿಗೆ 1576 ಕೋಟಿ ರೂ. ಮೊತ್ತದಲ್ಲಿ ಬಹುಗ್ರಾಮ ಯೋಜನೆಯಡಿ ಕುಡಿಯುವ ನೀರನ್ನು ಕಲ್ಪಿಸಲು ಗುರುವಾರ ನಡೆದ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಕೋವಿಡ್-19 ಮೂರನೇ ಅಲೆ ಸಿದ್ಧತೆಗಾಗಿ 317 ಕೋಟಿ ರೂ. ಮೊತ್ತದ ಉಪಕರಣ ಮತ್ತು ಪರಿಕರಗಳನ್ನು ಖರೀದಿಸಲು, 52 ಕೋಟಿ ರೂ. ಮೊತ್ತದಲ್ಲಿ ಸಿವಿಲ್ ಕಾಮಗಾರಿ ನಡೆಸಲು ಸಂಪುಟದ ಒಪ್ಪಿಗೆ ದೊರೆತಿದೆ.
ಯಾದಗಿರಿಗೆ ಸಿಹಿ: ಯಾದಗಿರಿ ಜಿಲ್ಲೆಯ ಎಲ್ಲ ಗ್ರಾಮೀಣ ಜನ ವಸತಿಗಳಿಗೆ ಹಾಗೂ ಮೂರು ನಗರ ಸ್ಥಳೀಯ ಸಂಸ್ಥೆಗಳಾದ ಕಕ್ಕೆರಾ, ಕೆಂಭಾವಿ ಮತ್ತು ಹುಣಸಗಿ ಪಟ್ಟಣಗಳಿಗೆ ಕುಡಿಯುವ ನೀರನ್ನು ಒದಗಿಸುವ ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿ 1358.62 ಕೋಟಿ ರೂ. ಮೊತ್ತದ ಯೋಜನೆಯಾಗಿರಲಿದೆ.
ವರ್ಷದಲ್ಲಿ ಅನುಷ್ಠಾನ: ರಾಜ್ಯದಲ್ಲ ಜಲ ಮೂಲದ ವ್ಯವಸ್ಥೆ ಇರುವ ಎಲ್ಲ ಜನವಸತಿಗಳಿಗೆ ಕಡೆಗೂ ಆದ್ಯತೆ ಮೇಲೆ ಬಹುಗ್ರಾಮ ಯೋಜನೆಯಡಿ ನೀರು ಕೊಡಲು ಕ್ರಮಕೈಗೊಳ್ಳಲಾಗುತ್ತಿದೆ. ಮುಂದಿನ ಒಂದು ವರ್ಷದಲ್ಲಿ ದೊಡ್ಡ ಪ್ರಮಾಣದಲ್ಲಿ ಈ ಯೋಜನೆ ಅನುಷ್ಠಾನವಾಗಲಿದೆ ಎಂದು ಯೋಜನೆ ಕುರಿತು ಹಿರಿಯ ಅಧಿಕಾರಿ ವಿವರಿಸಿದ್ದಾರೆ. ಇದಲ್ಲದೆ, ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಘಟ್ಟಿ ಬಸವಣ್ಣ ಕುಡಿಯುವ ನೀರು ಸರಬರಾಜು ಯೋಜನೆಯ 990 ಕೋಟಿ ರೂ.ಮೊತ್ತದ ವಿವರವಾದ ಯೋಜನೆಗೆ ಸಂಪುಟ ಘಟನೋತ್ತರ ಅನುಮೋದನೆ ನೀಡಿದೆ. ಜತೆಗೆ ಲೋಕಾಯುಕ್ತ ಸಂಸ್ಥೆಯಲ್ಲಿ ಖಾಲಿ ಇರುವ ಅಪರ ನಿಬಂಧಕರ(ವಿಚಾರಣೆಗಳು) ಹುದ್ದೆಗಳಿಗೆ ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ವೃಂದದ ಅಧಿಕಾರಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲು ಅವಕಾಶ ಮಾಡಿಕೊಡಲಾಗಿದೆ.
ಸುಧಾಕರ್ ಪ್ರಸ್ತಾವನೆಗೆ ತಡೆ: ಆರೋಗ್ಯ ಸಚಿವ ಡಾ.ಸುಧಾಕರ್ ವಿರುದ್ಧ ಸಂಪುಟ ಸದಸ್ಯರಿಗಿರುವ ಅಸಮಾಧಾನ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಬಹಿರಂಗವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಮಂಚೇನಹಳ್ಳಿಯಲ್ಲಿ ಹೊಸದಾಗಿ ತಾಲೂಕು ಆಸ್ಪತ್ರೆ ಕಟ್ಟಡ ನಿರ್ವಿುಸುವ ಕಾಮಗಾರಿಗೆ 93 ಕೋಟಿ ರೂ. ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಅನುಮೋದನೆಗೊಂಡಿರುವ ಗೌರಿಬಿದನೂರು ತಾಲೂಕು ಮಟ್ಟದ ಆಸ್ಪತ್ರೆ ಮತ್ತು ಸಿಬ್ಬಂದಿ ವಸತಿಗೃಹಗಳ ನಿರ್ವಣಕ್ಕೆ 27 ಕೋಟಿ ರೂ. ಮಂಜೂರು ಮಾಡಬೇಕೆಂಬ ಆರೋಗ್ಯ ಇಲಾಖೆ ಪ್ರಸ್ತಾವನೆ ಸಂಪುಟದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಯಿತು.
ಈ ವಿಷಯ ಚರ್ಚೆಗೆ ಇಡುತ್ತಿದ್ದಂತೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ ಅಸಮಾಧಾನ ಹೊರಹಾಕಿದ್ದಾರೆ. ನಮ್ಮ ಜಿಲ್ಲೆಯ ಅಗತ್ಯತೆ ಮತ್ತು ಹಿಂದೆ ಆದ ನಿರ್ಣಯದ ಪ್ರಸ್ತಾಪ ಮಾಡಿದ್ದಾರೆ. ಇವರ ಸಿಟ್ಟಿಗೆ ದನಿಗೂಡಿಸಿದ ಡಾ.ಸಿ.ಎನ್. ಅಶ್ವತ್ಥನಾರಾಯಣ ತಾವು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಕೈಗೊಂಡ ನಿರ್ಣಯವನ್ನು ಹೇಳಿ ಆರೋಗ್ಯ ಸಚಿವರ ವಿರುದ್ಧ ತಿರುಗಿಬಿದ್ದರು. ವಿಷಯ ಅಷ್ಟಕ್ಕೆ ನಿಲ್ಲದೇ ಎಂ.ಟಿ.ಬಿ ನಾಗರಾಜ್ ಚರ್ಚೆಗೆ ಇನ್ನಷ್ಟು ಕಾವು ನೀಡುವಂತೆ ಪದಪ್ರಯೋಗ ಮಾಡಿದರೆನ್ನಲಾಗಿದೆ.
ನೀವು ಆರೋಗ್ಯ ಸಚಿವರು ನಿಮ್ಮ ಕ್ಷೇತ್ರಕ್ಕಲ್ಲ, ಇಡೀ ರಾಜ್ಯಕ್ಕೆ. ಎಲ್ಲವೂ ನಿಮ್ಮ ಕ್ಷೇತ್ರಕ್ಕಾದರೆ ನಾವೇನು ಮಾಡಬೇಕು, ಜನರಿಗೆ ಏನು ಹೇಳಬೇಕು ಎಂಬಿತ್ಯಾದಿ ಮಾತುಗಳನ್ನು ಆರೋಗ್ಯ ಸಚಿವರನ್ನು ಕಟ್ಟಿಹಾಕಿತು. ಆಕ್ರೋಶದ ತೀವ್ರತೆ ಗಮನಿಸಿದ ಸಿಎಂ ಪ್ರಸ್ತಾವನೆಯನ್ನು ತಡೆಹಿಡಿದರು ಎಂದು ಮೂಲಗಳು ತಿಳಿಸಿವೆ. ಹಿರಿಯ ಸಚಿವರೊಬ್ಬರು ಸುಧಾಕರ್ ಸಹಾಯಕ್ಕೆ ಬಂದು, ಈ ಪ್ರಸ್ತಾವನೆ ಇಷ್ಟೆಲ್ಲ ಚರ್ಚೆಯಾದ ಮೇಲೆ ತಡೆ ಹಿಡಿಯುವುದು ಬೇಡ, ಇದಕ್ಕೆ ಒಪ್ಪಿಗೆ ಕೊಡೋಣ. ಬೇರೆ ಬೇಡಿಕೆಗಳನ್ನು ಮುಂದಿನ ದಿನಗಳಲ್ಲಿ ಆದ್ಯತೆ ಮೇಲೆ ಪೂರೈಸಿದರಾಯಿತು ಎಂಬ ಸಲಹೆ ನೀಡಿದರೂ, ಖುದ್ದು ಸಿಎಂ ತಲೆಯಾಡಿಸಿ ಪ್ರಸ್ತಾವನೆಗೆ ತಡೆ ಹಾಕುವ ಬಗ್ಗೆಯೇ ಒಲವು ತೋರಿಸಿದರೆಂದು ಮೂಲಗಳು ತಿಳಿಸಿವೆ.
ದಕ್ಷಿಣ ಕನ್ನಡಕ್ಕೆ ಆದ್ಯತೆ: ಬಂಟ್ವಾಳ ಮತ್ತು ಮಂಗಳೂರು ತಾಲೂಕಿನ ಉಳಾಯಿಬೆಟ್ಟು ಮತ್ತು ಇತರ 14 ಹಳ್ಳಿಗಳಿಗೆ (132 ಜನವಸತಿಗಳಿಗೆ) ಡಿಬಿಒಟಿ (ಡಿಸೈನ್ ಬಿಲ್ಟ್ ಆಪರೇಟ್ ಮತ್ತು ಟ್ರಾನ್ಸ್ಫರ್) ಆಧಾರದ ಮೇಲೆ ಕುಡಿಯುವ ನೀರಿನ ಯೋಜನೆಗೆ 73.10 ಕೋಟಿ ರೂ. ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಮತ್ತು ಮೂಡಬಿದ್ರೆ ತಾಲೂಕಿನ 39 ಹಳ್ಳಿಗಳಿಗೆ (583) ಜನವಸತಿಗಳಿಗೆ ಡಿಬಿಒಟಿ ಆಧಾರದ 145 ಕೋಟಿ ರೂ.ಗಳ ಯೋಜನೆಗೆ ಅನುಮೋದನೆ ನೀಡಲಾಗಿದೆ. ಜಲಜೀವನ್ ಮಿಷನ್ ಯೋಜನೆ ಅನುಷ್ಠಾನಕ್ಕೆ ವೇಗ ನೀಡುವ ಸಂಬಂಧ ಕೇಂದ್ರ ಜಲ ಶಕ್ತಿ ಸಚಿವರು ರಾಜ್ಯಕ್ಕೆ ಆಗಮಿಸಿ ಪ್ರಗತಿ ಪರಿಶೀಲನೆ ನಡೆಸಿದ್ದರು. ಗ್ರಾಮೀಣ ಭಾಗದಲ್ಲಿ ಪ್ರತಿ ವ್ಯಕ್ತಿಗೆ ನಿತ್ಯ 55 ಲೀಟರ್ ನೀರು ದೊರಕಿಸಿಕೊಡಬೇಕೆಂಬ ನಿರ್ದಿಷ್ಟ ಗುರಿಯ ಯೋಜನೆಗೆ ಕೇಂದ್ರ ಸರ್ಕಾರ ಒಟ್ಟಾರೆ 3.60 ಲಕ್ಷ ಕೋಟಿ ರೂ. ಬೇಕಾಗಬಹುದೆಂದ ಅಂದಾಜಿಸಿದೆ.
ಜಮೀನುಹಂಚಿಕೆ ನೀತಿ ಬಾಕಿ: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಜಮೀನು ಹಂಚಿಕೆ ನೀತಿಗೆ ತಿದ್ದುಪಡಿ ಮಾಡುವ ಕೈಗಾರಿಕೆ ಇಲಾಖೆ ಪ್ರಸ್ತಾವನೆ ನೀಡುವ ಮುನ್ನ ಈ ವಿಷಯದಲ್ಲಿ ಇನ್ನೊಂದಿಷ್ಟು ಪಕ್ವತೆ ಅಗತ್ಯವೆಂದು ಮನಗಂಡ ಸಿಎಂ ತಡೆ ಹಿಡಿದರು ಎನ್ನಲಾಗಿದೆ. ಖುದ್ದು ತಾವೊಮ್ಮೆ ಪರಿಶೀಲನೆ ನಡೆಸಬೇಕು, ಈ ಬಗ್ಗೆ ಸಭೆ ನಡೆಸಿ ನಂತರ ತೀರ್ಮಾನ ಮಾಡಿದರಾಯಿತು. ಈಗ ಬೇಡ ಎಂದು ಸಭೆಗೆ ತಿಳಿಸಿದ್ದಾರೆ. ಪ್ರಸ್ತುತ ಕೈಗಾರಿಕೆ ನಿವೇಶನವನ್ನು 99 ವರ್ಷ ಲೀಸ್ ನೀಡುವ ಪದ್ಧತಿ ಇದ್ದು, ಖಾಯಂ ಮಾಡಿಕೊಡಬೇಕೆಂಬ ಬೇಡಿಕೆ ಉದ್ಯಮದ್ದಾಗಿದೆ.