ಸೈಬರ್ ಭದ್ರತಾ ನೀತಿಗೆ ಸಂಪುಟ ಅಸ್ತು

Cyber Crime (1)
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ಡಿಜಿಟಲೀಕರಣ ಹೆಚ್ಚುತ್ತಿರುವಂತೆ ಸೈಬರ್ ಕಳ್ಳತನ, ವೈಯಕ್ತಿಕ ಮಾಹಿತಿ ಸೋರಿಕೆಯ ಪ್ರಕರಣ ವ್ಯಾಪಕವಾಗುತ್ತಿದೆ. ಹೀಗಾಗಿ ಜನ ಸಾಮಾನ್ಯರಲ್ಲಿ ಇದರ ಬಗ್ಗೆ ಅರಿವು ಮೂಡಿಸಲು ಮತ್ತು ಸೂಕ್ತ ಗಮನ ಕೊಡಲು ‘ಕರ್ನಾಟಕ ಸೈಬರ್ ಭದ್ರತಾ ನೀತಿ’ಯನ್ನು ಅಳವಡಿಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ.

ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ನೀತಿಯ ಅಂಶಗಳು ಪ್ರಸ್ತಾಪವಾಗಿದ್ದು, ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆಯವರು ನೀತಿಯ ಅಗತ್ಯತೆಯನ್ನು ಸಂಪುಟ ಸಹೋದ್ಯೋಗಿಗಳ ಗಮನಕ್ಕೆ ತಂದು ಮನವರಿಕೆ ಮಾಡಿಕೊಟ್ಟರು.

ರಾಜ್ಯ ಸರ್ಕಾರದ ನೇತೃತ್ವದಲ್ಲಿ ನಡೆಯುವ ಹೊಸ ತಂತ್ರಾಂಶಗಳ ಪ್ರಾರಂಭ, ಆನ್‌ಲೈನ್ ಬ್ಯಾಂಕಿಂಗ್ ಮತ್ತು ತಾಂತ್ರಿಕ ಸಾಕ್ಷರತೆ ಕಾರ್ಯಕ್ರಮಗಳು, ಸೈಬರ್ ಭದ್ರತೆ, ಜಾಗೃತಿ, ತರಬೇತಿ ನೀಡುವುದನ್ನು ನೀತಿ ಒಳಗೊಂಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಸಂಟಪುಟ ಸಭೆಯ ನಿರ್ಧಾರವನ್ನು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಸೈಬರ್ ಭದ್ರತೆಯನ್ನು ಮತ್ತು ದತ್ತಾಂಶ ಖಾಸಗಿತನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸುವುದು, ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು, ಪಂಚಾಯಿತಿಗಳು ಈ ಜಾಗೃತ ಕಾರ್ಯಕ್ರಮವನ್ನು ಕಾಳಕಾಲಕ್ಕೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು, ಜತೆಗೆ ಈ ಪ್ರಯತ್ನದ ಮೌಲ್ಯಮಾಪನ ಮಾಡುವುದು, ಸಾಮಾಜಿಕ ಜಾಳತಾಣಗಳು ಪರಸ್ಪರ ಸಂಪರ್ಕ ತಂತ್ರಜ್ಞಾನ ಔದ್ಯಮಿಕ ಸಹಭಾಗಿತ್ವದೊದಿಗೆ ಕಾರ್ಯಕ್ರಮ ಕೈಗೊಳ್ಳುವುದು ನೀತಿಯಲ್ಲಿರುವ ಪ್ರಮುಖ ಪ್ರಸ್ತಾಪಗಳಾಗಿವೆ.

ಇದರೊಟ್ಟಿಗೆ, ಪ್ರಸ್ತುತ ಸೈಬರ್ ಭದ್ರತೆ ಮತ್ತು ದತ್ತಾಂಶ ಖಾಸಗಿತನದ ಕುರಿತು ಸಮೀಕ್ಷೆಗಳನ್ನು ನಡೆಸಲಾಗುತ್ತದೆ. ಸ್ಥಳೀಯ, ಶೈಕ್ಷಣಿಕ ಸಂಸ್ಥೆಗಳು, ಸ್ವಯಂಸೇವಾ ಕಾರ್ಯಕರ್ತರ ಮೂಲಕ ಜಾಗೃತಿ ಮೂಡಿಸಲು ವಿಕೇಂದ್ರಿತ ಕ್ರಮ ಕೈಗೊಳ್ಳಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net