

ಲಂಡನ್: ಪೌರತ್ವ ತಿದ್ದುಪಡಿ ಕಾಯ್ದೆ ವಿಷಯದಲ್ಲಿ ಮೂಗು ತೂರಿಸದಂತೆ ಯುರೋಪ್ಗೆ ಭಾರತ ಖಡಕ್ ಪ್ರತಿಕ್ರಿಯೆ ನೀಡಿರುವ ಬೆನ್ನಲ್ಲೇ, ಅಲ್ಲಿನ ಸಂಸತ್ನಲ್ಲಿ ಸಿಎಎ ವಿರುದ್ಧದ ಜಂಟಿ ಗೊತ್ತುವಳಿ ಮೇಲೆ ಮತದಾನಕ್ಕೆ ಸಿದ್ಧತೆ ನಡೆದಿದೆ.
ಸಿಎಎ ವಿರೋಧಿ ಗೊತ್ತುವಳಿ ಕುರಿತು ಐರೋಪ್ಯ ಒಕ್ಕೂಟದ ಸಂಸತ್ನಲ್ಲಿ ಬುಧವಾರ ಚರ್ಚೆ ಪ್ರಾರಂಭವಾಗಿದ್ದು, ಗುರುವಾರ ಮತದಾನ ನಡೆಯುವ ಸಾಧ್ಯತೆ ಇದೆ. ಯುರೋಪ್ ಸಂಸತ್ನ 751 ಸಂಸದರಲ್ಲಿ 560 ಸಂಸದರು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿದ್ದಾರೆ. ಇದು ತಾರತಮ್ಯ ಮತ್ತು ಅಪಾಯಕಾರಿ ವಿಭಜನೆ ಎಂದು ಆರೋಪಿಸಿ ಕಳೆದ ವಾರ ಗೊತ್ತುವಳಿ ಮಂಡಿಸಿದ್ದರು. ಇದರ ಮೇಲೆ ಚರ್ಚೆ ನಡೆಯಲಿದೆ. ಸಂಸತ್ನಲ್ಲಿ ಸಿಎಎ ವಿರುದ್ಧ ಇರುವ ಸಂಸದರು ಬಹುಸಂಖ್ಯೆಯಲ್ಲಿರುವುದರಿಂದ ಗೊತ್ತುವಳಿ ಸುಲಭ ಅಂಗೀಕಾರವಾಗಲಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ತಾರತಮ್ಯ ಮತ್ತು ಅಪಾಯಕಾರಿಯಾದ ವಿಭಜನೆ. ಸಿಎಎ ಜಗತ್ತಿನಲ್ಲೇ ಅತಿ ಹೆಚ್ಚು ಸಂಖ್ಯೆ ಜನರು ದೇಶರಹಿತರಾಗುವ ಬಿಕ್ಕಟ್ಟನ್ನು ಸೃಷ್ಟಿಸಲಿದೆ. ಭಾರತದಾದ್ಯಂತ ವಿವಿಧ ವಿಶ್ವವಿದ್ಯಾಲಯಗಳಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಗಳು ಕ್ರೂರ ದಬ್ಬಾಳಿಕೆ ಎದುರಿಸಬೇಕಾಯಿತು. ಶಾಂತಿಯುತ ಪ್ರತಿಭಟನೆಗಳನ್ನು ತಡೆಯಲು ಅಧಿಕಾರಿಗಳು ಅಂತರ್ಜಾಲ ಸಂಪರ್ಕ ಸ್ಥಗಿತಗೊಳಿಸಿದ್ದರು. ಸಾರ್ವಜನಿಕ ಸಾರಿಗೆ ಮೇಲೆ ನಿರ್ಬಂಧ ವಿಧಿಸಲಾಗಿತ್ತು ಎಂದು ಗೊತ್ತುವಳಿಯಲ್ಲಿ ಆರೋಪಿಸಲಾಗಿದೆ. ಉತ್ತರ ಪ್ರದೇಶದಲ್ಲಿ ನೂರಾರು ಪ್ರತಿಭಟನಾಕಾರರನ್ನು ಥಳಿಸಲಾಗಿದೆ ಮತ್ತು ಅವರಿಗೆ ಗುಂಡು ಹೊಡೆಯಲಾಗಿದೆ ಎಂಬ ವರದಿಗಳಿವೆ. ಜತೆಗೆ ಎನ್ಆರ್ಸಿ ಅಪಾಯಕಾರಿ ಬದಲಾವಣೆ ಸೂಚಿಸುತ್ತದೆ. ಇದರಿಂದ ದೊಡ್ಡ ಪ್ರಮಾಣದ ಬಿಕ್ಕಟ್ಟು ಸೃಷ್ಟಿಯಾಗಬಹುದು ಎಂದು ಯುರೋಪ್ ಸಂಸದರು ಆತಂಕ ವ್ಯಕ್ತಪಡಿಸಿದ್ದಾರೆ.
ಯುರೋಪ್ ಸಂಸತ್ತು ಸ್ವತಂತ್ರ ಸಂಸ್ಥೆಯಾಗಿದ್ದು, ಅದರ ನಿರ್ಣಯಗಳು ಕಾನೂನು ಮಾನ್ಯತೆಯನ್ನು ಹೊಂದಿಲ್ಲ. ಜ. 31ರಂದು ಬ್ರೆಕ್ಸಿಟ್ ಜಾರಿಯಾದ ಬಳಿಕ ಬ್ರಿಟನ್ನ 73 ಸಂಸದರು ಯುರೋಪ್ ಸಂಸತ್ನ್ನು ತೊರೆಯಲಿದ್ದಾರೆ. ಹೀಗಾಗಿ ಭಾರತದ ವಿರುದ್ಧ ನಿರ್ಣಯ ಮಂಡಿಸಲು ಯುರೋಪ್ ಸಂಸತ್ಗೆ ಇದು ಕೊನೇ ಅವಕಾಶ ಎನ್ನಲಾಗಿದೆ. ಒಂದು ವೇಳೆ ಈ ಗೊತ್ತುವಳಿ ಅಂಗೀಕಾರವಾದರೆ ಕಾಶ್ಮೀರ ವಿಚಾರದಲ್ಲಿ ಎಲ್ಲ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಸೋತು ಸುಣ್ಣವಾಗಿರುವ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿರುದ್ಧ ಸಿಗಬಹುದುದಾದ ಸಣ್ಣ ಪ್ರಮಾಣದ ಜಯ ಎಂದು ವಿಶ್ಲೇಷಿಸಲಾಗಿದೆ.