ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತದ ಮುಸ್ಲಿಮರಿಗೆ ಏನಾದರೂ ತೊಂದರೆಯಾದರೆ ಅದರ ವಿರುದ್ಧ ಧ್ವನಿ ಎತ್ತುವ ಮೊದಲ ವ್ಯಕ್ತಿ ನಾನೇ ಆಗಿರುತ್ತೇನೆ..

Rajanikanth 5 Feb 20
Published on

ಚೆನ್ನೈ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗಳು ಸತತವಾಗಿ ನಡೆಯುತ್ತಲೇ ಇವೆ. ಇದೊಂದು ಮುಸ್ಲಿಂ ವಿರೋಧಿ ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸುತ್ತಿದ್ದಾರೆ.

ಹಲವು ಪ್ರತಿಪಕ್ಷಗಳೂ ಸಹ ಸಿಎಎ, ಎನ್​ಆರ್​ಸಿ, ಎನ್​ಪಿಆರ್​ಗಳಿಗೆ ವಿರೋಧ ವ್ಯಕ್ತಪಡಿಸುತ್ತಿವೆ. ಹಾಗೇ ಸೂಪರ್​ ಸ್ಟಾರ್​ ರಜನೀಕಾಂತ್​ ಕೂಡ ಸಿಎಎ ಮತ್ತು ಎನ್​ಪಿಆರ್​ ಬಗ್ಗೆ ಮಾತನಾಡಿದ್ದಾರೆ.

ಚೆನ್ನೈನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್​ಪಿಆರ್​) ದೇಶಕ್ಕೆ ತುಂಬ ಮುಖ್ಯ. ಇದನ್ನು ಹಿಂದೆ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗಲೂ ಎನ್​ಪಿಆರ್​ನ್ನು ಮಾಡಿತ್ತು ಎಂದಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಪ್ರತಿಕ್ರಿಯೆ ನೀಡಿ, ಸಿಎಎಯಿಂದ ಮುಸ್ಲಿಮರಿಗೆ ಯಾವುದೇ ತೊಂದರೆಯೂ ಆಗುವುದಿಲ್ಲ. ಹಾಗೊಮ್ಮೆ ಭಾರತದ ಮುಸ್ಲಿಂ ಸಮುದಾಯಕ್ಕೆ ಸಿಎಎಯಿಂದ ಸಮಸ್ಯೆಯಾದರೆ ಅದರ ವಿರುದ್ಧ ಧ್ವನಿ ಎತ್ತುವ ಮೊದಲ ವ್ಯಕ್ತಿ ನಾನೇ ಆಗಿರುತ್ತೇನೆ ಎಂದು ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತೀಯ ಮುಸ್ಲಿಮರಿಗೆ ಯಾವುದೇ ಅಪಾಯವಿಲ್ಲ ಎಂದು ಕೇಂದ್ರ ಸರ್ಕಾರವೇ ಭರವಸೆ ನೀಡಿದೆ ಎಂದು ರಜನೀಕಾಂತ್​ ತಿಳಿಸಿದ್ದಾರೆ.

ಅಷ್ಟಕ್ಕೂ ಭಾರತದ ವಿಭಜನೆಯಾದ ಬಳಿಕ ಈ ದೇಶವನ್ನೇ ಆಯ್ಕೆ ಮಾಡಿಕೊಂಡು ನೆಲೆಸಿರುವ ಮುಸ್ಲಿಮರನ್ನು ಈಗ ಹೊರಗೆ ಕಳಿಸಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.

ಕೆಲವು ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಜನರನ್ನು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿದ ರಜನೀಕಾಂತ್​, ಸಿಎಎ ವಿರೋಧಿ ಪ್ರತಿಭಟನೆಗಳನ್ನು ಬೆಂಬಲಿಸುತ್ತಿರುವ ಕೆಲವು ಧಾರ್ಮಿಕ ಮುಖಂಡರ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net