ಸಿಎ ಕಮಲ್ ಗರ್ಗ್ ಸಿಎ ಧ್ವಜವನ್ನು ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಆರ್ಥಿಕ ಶಿಸ್ತು ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಳ್ಳುವಲ್ಲಿ ಚಾರ್ಟರ್ಡ್ ಅಕೌಂಟೆಂಟ್ಸ್ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇವರು ವ್ಯವಹಾರಗಳ ಆರ್ಥಿಕ ಆರೋಗ್ಯದ ಕಾವಲುಗಾರರು. ಸಿಎ ಆಡಿಟ್‌ನಲ್ಲಿ ನಿರಂತರ ಗುಣಮಟ್ಟ ನಿಯಂತ್ರಣ ಅತ್ಯಗತ್ಯ. ಇದು ವ್ಯವಹಾರದ ನಿಖರತೆ, ವಿಶ್ವಾಸಾರ್ಹತೆ ಮತ್ತು ವೃತ್ತಿಪರ ಮಾನದಂಡಗಳನ್ನು ಎತ್ತಿಹಿಡಿಯಲು ಸಹಾಯ ಮಾಡುತ್ತದೆ. ಆಡಿಟಿಂಗ್‌ನಲ್ಲಿ ಸಣ್ಣ ಲೋಪವೂ ದೊಡ್ಡ ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು. ಕಾರ್ಪೊರೇಟ್ ವರದಿಗಾರಿಕೆಯ ಪ್ರಮುಖ ಸೂಕ್ಷ್ಮತೆಯೆಂದರೆ, ಇದು ಕೇವಲ ಅಂಕಿ-ಅಂಶಗಳ ಪ್ರಸ್ತುತಿಯಲ್ಲ; ಬದಲಿಗೆ ಹೂಡಿಕೆದಾರರು, ಸರ್ಕಾರ ಮತ್ತು ಸಾರ್ವಜನಿಕರಲ್ಲಿ ನಂಬಿಕೆ ಮೂಡಿಸುವ ಸಾಧನ. ನಿಯಂತ್ರಕ ನಿಯಮಗಳ ಪಾಲನೆ ಮತ್ತು ಪಾರದರ್ಶಕ ವರದಿಗಾರಿಕೆಯು ಕಾರ್ಪೊರೇಟ್ ವಲಯದ ಸುಸ್ಥಿರ ಬೆಳವಣಿಗೆಗೆ ಮತ್ತು ಜಾಗತಿಕ ಮಟ್ಟದಲ್ಲಿ ದೇಶದ ಆರ್ಥಿಕತೆಯ ಮೌಲ್ಯವನ್ನು ಹೆಚ್ಚಿಸಲು ಬಲವಾದ ಬುನಾದಿಯಾಗಿದೆ ಎಂದರು.