

ಬೆಂಗಳೂರು:
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಮರಳಿ ಪಕ್ಷಕ್ಕೆ ಕರೆ ತರುವ ಬಗ್ಗೆ ರಾಷ್ಟ್ರಮಟ್ಟದಲ್ಲಿ ಪ್ರಯತ್ನ ನಡೆದಿಲ್ಲ ಎಂದು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಈಶ್ವರಪ್ಪ ಅವರು ವಿಜಯೇಂದ್ರ ಅವರ ನಾಯಕತ್ವ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದರು.
ಲೋಕಸಭೆಯಲ್ಲಿ ಪಕ್ಷಕ್ಕಾಗಿ ಅವರು ಸ್ಪರ್ಧೆ ಮಾಡಲಿಲ್ಲ. ಮಗನಿಗಾಗಿ ಸ್ಪರ್ಧೆ ಮಾಡಿದ್ದರು. ಅವರಿಗೆ ಅಲ್ಲಿ ಠೇವಣಿಯೂ ಬರಲಿಲ್ಲ. ಪಾಪ ಅವರಿಗೆ ಈ ರೀತಿ ಆಗಬಾರದಿತ್ತು ಎನ್ನುವ ನೋವು ನನಗಿದೆ ಎಂದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಈಶ್ವರಪ್ಪ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಬಾರದಿತ್ತು ಎಂದುಕೊಂಡಿದ್ದೆ. ಏನೇ ಇದ್ದರೂ ಈಶ್ವರಪ್ಪ ಅವರು ಬಿಜೆಪಿ ಬಗ್ಗೆ ಕಾಳಜಿ ಇಟ್ಟುಕೊಂಡು ಮಾತನಾಡಿದ್ದಾರೆ ಎಂದು ವ್ಯಂಗ್ಯವಾಡಿದರು. ಕೇಂದ್ರದ ವರಿಷ್ಠರ ಮಟ್ಟದಲ್ಲಿ ಯಾವುದೇ ಚರ್ಚೆ ಆಗಿಲ್ಲ. ಒಂದು ವೇಳೆ ಅವರು ಈಶ್ವರಪ್ಪ ಬಗ್ಗೆ ಮಾಹಿತಿ ಕೇಳಿದರೆ ಕೊಡುತ್ತೇನೆ. ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ ಎಂದರು.