

ಶಿವಾನಂದ ತಗಡೂರು, ಬೆಂಗಳೂರು:
ಅಂದು ತಾಯಿ ಗೌರಮ್ಮ ದೊಡ್ಡ ಮನಸ್ಸು ಮಾಡಿ ಸಂತೇಶಿವರದ ದೇವಾಲಯದ ಬಳಿ ಕುಳಿತಿದ್ದ ಮಹದೇವಯ್ಯನವರ ಮಡಿಲಿಗೆ ಭೈರಪ್ಪ ಅವರನ್ನು ಹಾಕದೆ ಇದ್ದರೆ, ಅವರು ಬದುಕುಳಿಯುವುದೇ ಕಷ್ಟವಿತ್ತು.
ಪ್ಲೇಗ್ ಮಹಾಮಾರಿಗೆ ತನ್ನ ಎರಡು ಮಕ್ಕಳನ್ನು ಕಳೆದುಕೊಂಡಿದ್ದ ಗೌರಮ್ಮ ಅವರಿಗೆ ಆ ಸಂದರ್ಭದಲ್ಲಿ ಈ ಕಠಿಣ ನಿರ್ಧಾರ ಅನಿವಾರ್ಯವಾಗಿತ್ತು.
ಐನೋರೆ, ನನ್ನ ವಂಶದ ಕುಡಿ ಇದು. ಇವನು ಬದುಕುಳಿದರೆ ಸಾಕು. ಮುಂದೆ ಸಂಸಾರಸ್ಥ ಆಗಲೇಬೇಕೆಂದೇನಿಲ್ಲ್ಲ. ನಿಮ್ಮಂತೆಯೇ ಸನ್ಯಾಸಿಯೇ ಆಗಲಿ. ಎಂದು ಅಂದು ಗಟ್ಟಿ ಮನಸ್ಸಿನ ನಿರ್ಧಾರ ತೆಗೆದುಕೊಂಡಿದ್ದರಿಂದಲೇ, ಭೈರಪ್ಪ ಪ್ಲೇಗ್ ಮಹಾಮಾರಿಯ ನಡುವೆ ಉಳಿದು, ಬೆಳೆದು ಸಾಧಕರಾದರು.
ಈ ಘಟನೆಗೆ ಸಾಕ್ಷಿ ಇನ್ನೂ ಸಂತೇಶಿವರಲ್ಲಿದ್ದಾರೆ. ಭೈರಪ್ಪ ಅವರ ಬಾಲ್ಯದ ಬದುಕು ಬವಣೆ ಕಂಡ ಜನರು ಈಗಲೂ ಕಣ್ಣೀರಾಗುತ್ತಾರೆ. ಕಡು ಬಡತನದಲ್ಲಿದ್ದ ಭೈರಪ್ಪ, ಗುಡಿ ಗೌಡರ ಮನೆಯಿಂದ ಹಿಡಿದು, ಕುರುಬರ ಕೇರಿಯ ತನಕ ಹಲವರ ಮನೆಯಲ್ಲಿ ಹೊಟ್ಟೆ ಹಸಿವು ನೀಗಿಸಿಕೊಂಡು ಬೆಳೆದವರು. ಆ ಕಾರಣಕ್ಕಾಗಿಯೇ ಈಗಲೂ ಸಂತೇಶಿವರದ ಜನರಿಗೆ ಅವರನ್ನು ಕಂಡರೆ ಅಗಾದವಾದ ಪ್ರೀತಿ.
ಮನೆ ಜಾಗದಲ್ಲಿ ಅಮ್ಮನ ಲೈಬ್ರರಿ:
ಹುಟ್ಟೂರಿನಲ್ಲಿ ಅವರಿಗೆ ಇದ್ದದ್ದು ಒಂದಿಷ್ಟು ಜಾಗ. ಅದನ್ನ ಬಿಟ್ಟರೆ ಬೇರೇನಿಲ್ಲ. ಆ ಜಾಗ ತಿಪ್ಪೇಗುಂಡಿಮಯವಾಗಿತ್ತು. ಅಲ್ಲೊಂದು ತನ್ನ ತಾಯಿಯ ನೆನಪಿಗಾಗಿ ಒಂದು ಗ್ರಂಥಾಲಯ ಮಾಡಬೇಕು ಎನ್ನುವ ಹೆಬ್ಬಯಕೆ ಭೈರಪ್ಪ ಅವರದ್ದು. ಅವರ ಕನಸಿಗೆ ಗ್ರಾಮಸ್ಥರು, ದಾನಿಗಳು ನೆರವಾದರು. ಭೈರಪ್ಪನವರ ಆಸಕ್ತಿ ಕಾರಣಕ್ಕಾಗಿಯೇ ಹುಟ್ಟೂರಿನಲ್ಲಿ ತಾಯಿ ಗೌರಮ್ಮ ಹೆಸರಿನಲ್ಲಿ ಲೈಬ್ರರಿ ಇದೆ.
ತಾವೇ ಕಾರು ಡ್ರೈವ್ ಮಾಡುತ್ತಿದ್ದರು:
ಮೈಸೂರಿನಿಂದ ಕಾರನ್ನು ತಾವೇ ಡ್ರೈವ್ ಮಾಡಿಕೊಂಡು ಸಂತೇಶಿವರಕ್ಕೆ ಬರುತ್ತಿದ್ದ ಭೈರಪ್ಪನವರು ಶಿಸ್ತಿನ ಸಿಪಾಯಿ ರೀತಿ ಕಾಣುತ್ತಿದ್ದರು. ಮೂರು ದಶಕಗಳಲ್ಲಿ ಅವರು ಅದೆಷ್ಟು ಬಾರಿ ಕಾರಿನಲ್ಲಿ ಊರಿಗೆ ಬಂದು ಹೋಗಿದ್ದಾರೋ! ಲೆಕ್ಕವಿಲ್ಲ. ಬಂದರೆ ಒಂದೇ ದಿನಕ್ಕೆ ಹೋಗುತ್ತಿರಲಿಲ್ಲ. ನುಗ್ಗೇಹಳ್ಳಿಯಲ್ಲಿ ಸಂಬಂದಿಕರ ಮನೆಯಲ್ಲಿ ಒಂದೆರಡು ದಿನ ಉಳಿದುಕೊಳ್ಳುತ್ತಿದ್ದರು. ನಾಲ್ಕು ಕಿ.ಮೀ.ದೂರದಲ್ಲಿರುವ ಸಂತೇಶಿವರಕ್ಕೆ ಬಂದು, ಲೈಬ್ರರಿಯಲ್ಲಿ ಕುಳಿತು, ಹಳೆಯ ನೆನಪುಗಳನ್ನು ಮಾಡಿಕೊಂಡು ಊರಿನವರ ಜೊತೆ ಒಡನಾಡಿದರೆ ಅವರಿಗೆ ಸ್ವರ್ಗದಷ್ಟೇ ಖುಷಿ.
ಊರ ಬೀದಿಯಲ್ಲಿ ಮೆರವಣಿಗೆ:
ಸರಸ್ವತಿ ಸಮ್ಮಾನ್ ಪುರಸ್ಕಾರ ಬಂದಾಗ ಹುಟ್ಟೂರಿನಲ್ಲಿ ಭೈರಪ್ಪ ಅವರನ್ನು ಮೆರವಣಿಗೆ ಮಾಡಿ ಸನ್ಮಾನ ಮಾಡಲಾಯಿತು. ಸುತ್ತ ಮುತ್ತಲ ಗ್ರಾಮದ ಜನರು ಭರ್ಜರಿಯಾಗಿ ಜಮಾಯಿಸಿದ್ದರು. ಆಗ ಈ ಸಂತೇಶಿವರವನ್ನು ನೋಡಲು ಸಾಹಿತ್ಯ ದಿಗ್ಗಜರೆಲ್ಲ ಬಂದಿದ್ದರು.
ಭೈರಪ್ಪನವರ ದಾಟು, ಪರ್ವ, ಗೃಹಭಂಗ ಸೇರಿದಂತೆ ಹಲವು ಕಾದಂಬರಿಗಳಲ್ಲಿ ಈ ಭಾಗದ ಜನರ ಜೀವನ ಅಭಿವ್ಯಕ್ತಗೊಂಡಿದೆ. ಅನೇಕ ಪಾತ್ರಗಳ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಈ ಭಾಗದ ಬದುಕನ್ನು ಬಸಿದು ಉಣಬಡಿಸಿದ್ದಾರೆ. ಅವರು ಸೃಷ್ಟಿಸಿದ ಹಲವು ಪಾತ್ರಗಳು ಈ ಭಾಗದ ಜನರ ಪಾತ್ರಗಳೇ ಆಗಿವೆ. ಈಗಲೂ ಆ ಭಾವ ಜನಮಾನಸದಲ್ಲಿದೆ.
ಊರಿಗೆ ನೀರು ತರಲು ಪ್ರತಿಜ್ಞೆ:
ಭೈರಪ್ಪನವರು ಒಮ್ಮೆ ಸಂತೇಶಿವರಕ್ಕೆ ಬಂದಿದ್ದಾಗ ಊರಿನ ಜನರೆಲ್ಲರೂ ಅವರಿಗೆ ಅವಲತ್ತುಕೊಳ್ಳುತ್ತಾರೆ. ನಮಗೆ ಜೀವನ ಮಾಡುವುದು ಕಷ್ಟವಾಗಿದೆ. ಊರ ಕೆರೆಯಲ್ಲಿ ನೀರಿಲ್ಲ. ಕುಡಿಯುವ ನೀರಿಗೂ ತಾತ್ವಾರ ಎದುರಾಗಿದೆ ಎಂದು. ಆಗ ಅವರು ಏನಾದರೂ ಮಾಡಿ ಹುಟ್ಟೂರು ಕೆರೆಗೆ ನೀರು ತರಬೇಕು ಎಂದು ಪ್ರತಿಜ್ಞೆ ಮಾಡುತ್ತಾರೆ. ಬಿಜೆಪಿ ಸರ್ಕಾರದಲ್ಲಿ ಬಸವರಾಜ ಬೊಮ್ಮಾಯಿ ಸಿಎಂ. ಅವರನ್ನು ಭೇಟಿ ಮಾಡಿದ ಭೈರಪ್ಪ ಅವರು ಸಂತೇಶಿವರ ಕೆರೆಗೆ ನೀರು ಹರಿಸುವ ಯೋಜನೆಯನ್ನು ಮಂಜೂರು ಮಾಡಿಸಿದರು. ಪರಿಣಾಮವಾಗಿ ಹೇಮಾವತಿ ಯೋಜನೆಯ ನೀರು ಹರಿದಿದ್ದರಿಂದ ಈಗ ಸಂತೇಶಿವರ ಕೆರೆ ಮೈದುಂಬಿ ನಿಂತಿದೆ. ಸುತ್ತ ಮುತ್ತಲ ದುಗ್ಗೋನಹಳ್ಳಿ, ಹೊಸಳ್ಳಿ, ಯಾಚನಘಟ್ಟ ಸೇರಿದಂತೆ ಹಲವು ಹಳ್ಳಿಗಳಿಗೆ ನೀರಿಗೆ ಆಸರೆಯಾಗಿದೆ.
ಹುಟ್ಟೂರಿನ ಋಣ ತೀರಿಸಿದ ಸಾರ್ಥಕತೆ:
ಹುಟ್ಟೂರಿಗೆ ನೀರು ಹರಿಸಿದ ಭಗಿರಥ ಭೈರಪ್ಪ ಎನ್ನುವುದು ಈ ಭಾಗದ ಜನ ಮಾನಸದಲ್ಲಿ ಮನೆ ಮಾತಾಯಿತು. ಆ ಕಾರಣಕ್ಕಾಗಿಯೇ ಅವರಿಗೆ ಸನ್ಮಾನ ಮಾಡಬೇಕು ಎನ್ನುವುದು ಊರಿನವರ ತವಕ. ಸಂತೇಶಿವರ ಗೇಟ್‌ನಿಂದ ಊರಿನ ತನಕ ಮೆರವಣಿಗೆ ಮಾಡಿ ಅವರಿಗೆ ಅದ್ದೂರಿ ಸನ್ಮಾನ ಮಾಡಲಾಯಿತು. ಆಗಲೂ ಅವರು ಹೇಳಿದ್ದು ಇಷ್ಟು. ದೇವರು ಅವಕಾಶ ನೀಡಿದ್ದರಿಂದ ನನ್ನ ಹುಟ್ಟೂರಿನ ಋಣ ತೀರಿಸಿದ್ದೇನೆ ಎಂದು.
ಮರೆಯಲಾಗದ ಹುಟ್ಟೂರ ನೆನಪು:
ಭೈರಪ್ಪನವರಿಗೆ ರಂಗನಾಥ ಗುಡ್ಡ, ಬಾಗೂರು, ನುಗ್ಗೇಹಳ್ಳಿ ಭಾಗದ ಜನರ ಬದುಕಿನ ಬಗ್ಗೆ ಅತೀವ ಪ್ರೀತಿ. ಅವರು ಸಾಧಕನಾಗಿ ಎಷ್ಟೇ ಎತ್ತರಕ್ಕೆ ಏರಿದರೂ, ಹುಟ್ಟೂರಿನ ನಂಟು ಕಡೆ ತನಕ ಬಿಡಲೇ ಇಲ್ಲ. ಈ ಭಾಗದಲ್ಲಿ ನಡೆದಾಡಿದ, ಒಡನಾಡಿದ ನೆನಪು ಮರೆಯಾಗಿರಲಿಲ್ಲ. ಊರಿನವರು ಯಾರಾದರೂ ಮೈಸೂರಿನಲ್ಲಿ ಅವರ ಮನೆಗೆ ಹೋದರೂ ಸಾಕು, ಮಳೆ ಬೆಳೆ ಹೇಗಿದೆ ಎಂದೆಲ್ಲ ವಿಚಾರಿಸುತ್ತ ತಮ್ಮ ಬಾಲ್ಯ ಜೀವನಕ್ಕೆ ಜಾರಿ ಬಿಡುತ್ತಿದ್ದರು. ಹುಟ್ಟೂರ ಬಗ್ಗೆ ಅಷ್ಟು ಮುಗ್ದ ಮನಸ್ಸು ಅವರೊಳಗಿತ್ತು.