ಉಪಸಮರ ಅಖಾಡ ಸಿದ್ಧ: ನಾಮಪತ್ರ ಸಲ್ಲಿಕೆ ಅಂತ್ಯ; ಪ್ರತಿಷ್ಠೆ ಪಣಕ್ಕಿಟ್ಟ ಕೈ, ಕಮಲ, ದಳ

Front
ಹಾನಗಲ್ಲದಲ್ಲಿ ಶುಕ್ರವಾರ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ನಾಮಪತ್ರ ಸಲ್ಲಿಸುವ ಮುನ್ನ ನಡೆಸಿದ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಅಪಾರ ಜನಸ್ತೋಮ.
Published on

ಬೆಂಗಳೂರು: ಆಡಳಿತಾರೂಢ ಭಾರತೀಯ ಜನತಾ ಪಕ್ಷ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಅಬ್ಬರದ ಪ್ರಚಾರ, ಭರ್ಜರಿ ಜನಬಲ ಪ್ರದರ್ಶನದೊಂದಿಗೆ ಹಾನಗಲ್ ಮತ್ತು ಸಿಂದಗಿ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುಕ್ರವಾರ ಪೂರ್ಣಗೊಂಡಿದೆ. ಇದರೊಂದಿಗೆ ಮೂರೂ ಪಕ್ಷಗಳ ಪ್ರತಿಷ್ಠೆಯ ಹೋರಾಟಕ್ಕೆ ಅಖಾಡ ಸಜ್ಜಾದಂತಾಗಿದೆ.

ಬಿಜೆಪಿಯ ಹಿರಿಯ ಧುರೀಣ ಸಿ.ಎಂ. ಉದಾಸಿ (ಹಾನಗಲ್), ಜೆಡಿಎಸ್​ನ ಹಿರಿಯ ನಾಯಕ ಎಂ.ಸಿ.ಮನಗೂಳಿ (ಸಿಂದಗಿ) ನಿಧನದಿಂದ ತೆರವಾಗಿರುವ ಈ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದೆ. ಹಾನಗಲ್​ನಲ್ಲಿ ಬಿಜೆಪಿಯಿಂದ ಶಿವರಾಜ ಸಜ್ಜನರ್, ಕಾಂಗ್ರೆಸ್​ನಿಂದ ಶ್ರೀನಿವಾಸ ಮಾನೆ ಮತ್ತು ಜೆಡಿಎಸ್​ನಿಂದ ನಿಯಾಜ್ ಶೇಖ್ ಉಮೇದುವಾರರಾಗಿದ್ದಾರೆ. ಸಿಂದಗಿಯಲ್ಲಿ ಬಿಜೆಪಿಯಿಂದ ರಮೇಶ್ ಭೂಸನೂರು, ಕಾಂಗ್ರೆಸ್​ನಿಂದ ಅಶೋಕ್ ಮನಗೂಳಿ ಮತ್ತು ಜೆಡಿಎಸ್​ನಿಂದ ನಾಜಿಯಾ ಶಕೀಲ್ ಅಂಗಡಿ ಸ್ಪರ್ಧೆಗೆ ಇಳಿದಿದ್ದಾರೆ.

ಸದ್ಯದ ಬೆಳವಣಿಗೆ ಗಮನಿಸಿದರೆ ತ್ರಿಕೋನ ಪೈಪೋಟಿ ಲಕ್ಷಣಗಳು ನಿಚ್ಚಳವಾಗಿವೆ. ಉಪ ಕದನದ ಮೊದಲಘಟ್ಟವಾದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ತುರುಸಿನ ಪ್ರಚಾರದೊಂದಿಗೆ ತೆರೆ ಕಂಡಿದ್ದು, ಮುಂದಿನ ದಿನಗಳಲ್ಲಿ ಚುನಾವಣಾ ಕಣ ರಂಗೇರಲಿದೆ. ಆಡಳಿತಾರೂಢ ಬಿಜೆಪಿ ಸರ್ಕಾರ ಮತ್ತು ಪಕ್ಷದ ವರ್ಚಸ್ಸು, ಕಾಂಗ್ರೆಸ್ ತಾನಿನ್ನೂ ಬಲಿಷ್ಠ ಮತ್ತು ಜೆಡಿಎಸ್ ಅಸ್ತಿತ್ವ ತೋರಿಸಿಕೊಳ್ಳಲು ಸಿದ್ಧವಾಗಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎದುರಿಸುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ಹಾನಗಲ್ ಕ್ಷೇತ್ರ ಅವರ ತವರು ಜಿಲ್ಲೆ ಹಾವೇರಿಯಲ್ಲಿರುವ ಕಾರಣ ಸವಾಲಾಗಿದೆ. ಹಾಗೆಯೇ ಸಿಂದಗಿ ವಶಪಡಿಸಿಕೊಳ್ಳುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಅಗತ್ಯ ಕಮಲ ಪಡೆಗಿದೆ.

ಹೆಚ್ಚಿದ ಮಹತ್ವ: ಮುಂಬರುವ ವಿಧಾನಸಭೆ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿಯಿರುವಾಗ ಮೂರೂ ಪ್ರಮುಖ ಪಕ್ಷಗಳು ಪೂರ್ವಾಭ್ಯಾಸ, ತರಹೇವಾರಿ ತಂತ್ರಗಾರಿಕೆ ಹೆಣೆಯಲಾರಂಭಿಸಿದ್ದವು. ಈ ಪ್ರಯೋಗ, ಸಂಘಟನೆ ಬಲವರ್ಧನೆ ಚಟುವಟಿಕೆಗಳು ನಡೆಯುತ್ತಿರುವ ಹೊಸ್ತಿಲಲ್ಲಿ ಎರಡು ಕ್ಷೇತ್ರಗಳ ಉಪ ಚುನಾವಣೆ ಎದುರಾಗಿದ್ದು, ಭವಿಷ್ಯದ ಉಜ್ವಲಗೊಳಿಸುವ ದೃಷ್ಟಿಯಿಂದ ತ್ರಿವಳಿ ಪಕ್ಷಗಳಿಗೆ ಮಹತ್ವದ್ದಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ನಡೆದ ಮೂರು ಸರಣಿ ಉಪ ಚುನಾವಣೆಗಳಿಗಿಂತ ಈ ಬಾರಿಯದು ಕುತೂಹಲ ಹೆಚ್ಚಿಸಿದೆ. ಜಿದ್ದಾಜಿದ್ದಿ ಬಗ್ಗೆ ತೀರ್ಪು ನೀಡಲಿರುವ ಜನತಾ ಜನಾರ್ದನರ ಮೂಡ್ ತಮ್ಮತ್ತ ತಿರುಗಿಸಿಕೊಳ್ಳಲು ಸ್ಪರ್ಧಾ ಕಣದಲ್ಲಿರುವ ಹುದ್ದರಿಗಳು ಬೆವರಿಳಿಸುವುದು ನಿಶ್ಚಿತ.

ಬದಲಾದ ಕಣ: ಉಪ ಚುನಾವಣೆಯಲ್ಲಿ ಬಿಜೆಪಿಯು ಉದಾಸಿ ಕುಟುಂಬದ ಬದಲಿಗೆ ಮಾಜಿ ಶಾಸಕ ಶಿವರಾಜ ಸಜ್ಜನರ್ ಅವರನ್ನು ಸ್ಪರ್ಧೆಗೆ ಇಳಿಸಿದೆ. ಕಾಂಗ್ರೆಸ್​ನಿಂದ ಶ್ರೀನಿವಾಸ ಮಾನೆ ಮತ್ತೊಮ್ಮೆ ಅದೃಷ್ಟ ಪರೀಕ್ಷಿಸಿಕೊಳ್ಳುತ್ತಿದ್ದು, ಜೆಡಿಎಸ್ ಹೊಸ ಮುಖಕ್ಕೆ ಮಣೆ ಹಾಕಿದೆ. ಸಿಂದಗಿಯನ್ನು ಜೆಡಿಎಸ್ ಭದ್ರಕೋಟೆ ಮಾಡಿದ್ದ ಮನಗೂಳಿ ಕುಟುಂಬ ಕಾಂಗ್ರೆಸ್ ಕಡೆ ವಾಲಿದೆ. ದಿವಂಗತ ಎಂ.ಸಿ.ಮನಗೂಳಿ ಪುತ್ರ ಅಶೋಕ್ ಮನಗೂಳಿ ಅವರನ್ನು ಕಾಂಗ್ರೆಸ್ ಸೆಳೆದುಕೊಂಡು ಕಣಕ್ಕೆ ಇಳಿಸಿದ್ದು, ಹಿಂದಿನ ಎರಡು ಚುನಾವಣೆಗಳಲ್ಲಿ ಜಯಿಸಿ, ಕಳೆದ ಬಾರಿ ಸೋತಿದ್ದ ರಮೇಶ್ ಭೂಸನೂರು ಮತ್ತೆ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಈ ಕ್ಷೇತ್ರದಲ್ಲೂ ಮುಸ್ಲಿಂ ಅಭ್ಯರ್ಥಿಯನ್ನು ಜೆಡಿಎಸ್ ಅಖಾಡಕ್ಕೆ ಇಳಿಸಿ, ಕೈಪಡೆಯ ಚಿಂತೆ ಹೆಚ್ಚಿಸಿದೆ.

ಮತಕಣ, ಚಿತ್ರಣ, ಸ್ವಾರಸ್ಯ

ಹಾನಗಲ್: ಹಾನಗಲ್ ಕ್ಷೇತ್ರದಲ್ಲಿ ಕಳೆದ ನಾಲ್ಕು ದಶಕಗಳಿಂದ ಸಿ.ಎಂ. ಉದಾಸಿಗೆ ಕಾಂಗ್ರೆಸ್​ನ ಮನೋಹರ ತಹಸೀಲ್ದಾರ್ ಅಥವಾ ಶ್ರೀನಿವಾಸ ಮಾನೆ ಪ್ರತಿಸ್ಪರ್ಧಿಗಳಾಗಿರುವುದು ಗಮನಾರ್ಹ. 2018ರ ಚುನಾವಣೆಯಲ್ಲಿ ಉದಾಸಿಯವರು ಮಾನೆ ಅವರನ್ನು 6,000 ಮತಗಳ ಅಂತರದಿಂದ ಸೋಲಿಸಿದ್ದರು. 2013ರಲ್ಲಿ ಕಾಂಗ್ರೆಸ್​ನ ಮನೋಹರ ತಹಸೀಲ್ದಾರ್ ಜಯಿಸಿದರೆ, ಜೆಡಿಎಸ್​ನಿಂದ ಸ್ಪರ್ಧಿಸಿದ್ದ ಬೊಮ್ಮನಳ್ಳಿ ಬಾಬು ಕೇವಲ 1,028 ಮತಗಳಿಸಿದ್ದರು. 2008ರಲ್ಲಿ ಉದಾಸಿ ಗೆದ್ದು ಬೀಗಿದ್ದರು. ಆದರೆ ಮೂರು ಚುನಾವಣೆಗಳಲ್ಲಿ ಗೆಲುವಿನ ಅಂತರ 6,000 ಮತಗಳ ಆಸುಪಾಸಿನಲ್ಲಿರುವುದು ಕುತೂಹಲಕಾರಿಯಾಗಿದೆ.

ಸಿಂದಗಿ: ಕಳೆದ 3 ಚುನಾವಣೆಗಳಲ್ಲಿ ಬಿಜೆಪಿಯ ರಮೇಶ್ ಭೂಸನೂರು ಮತ್ತು ಜೆಡಿಎಸ್​ನ ಎಂ.ಸಿ.ಮನಗೂಳಿ ಪರಸ್ಪರ ಎದುರಾಳಿಗಳಾಗಿದ್ದರು. 2018ರಲ್ಲಿ 9,000ಕ್ಕೂ ಅಧಿಕ ಮತಗಳಿಂದ ಮನಗೂಳಿ ಗೆದ್ದಿದ್ದರು.2008ರ ಚುನಾವಣೆಯಲ್ಲಿ 15,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಸಿದ್ದ ಭೂಸನೂರು, 2013ರಲ್ಲಿ ಕೇವಲ 642 ಮತಗಳ ಅಂತರದಲ್ಲಿ ಗೆಲುವಿನ ದಡ ಸೇರಿದ್ದರು.

ಯಾಕೆ ಮಹತ್ವ?

  • ಬಿಜೆಪಿ-ಆಡಳಿತವಿರೋಧಿ ಅಲೆಯಿಲ್ಲವೆಂದು ಸಾಬೀತುಪಡಿಸಬೇಕು
  • ಕಾಂಗ್ರೆಸ್- ಮರುಚೈತನ್ಯ ಪಡೆಯಲು ಒಂದು ಗೆಲುವು ಸಾಧಿಸಲೇಬೇಕು
  • ಜೆಡಿಎಸ್-ಕಿಂಗ್ ಮೇಕರ್ ಅಲ್ಲ, ತಾನೇ ಕಿಂಗ್ ಎಂದು ಸಾರಬೇಕು

ಮುಂದಿನ ಪ್ರಕ್ರಿಯೆ: ನಾಮಪತ್ರಗಳ ಪರಿಶೀಲನೆ ಅ.11ರಂದು ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯುವುದಕ್ಕೆ ಅ.13 ಕೊನೆಯ ದಿನವಾಗಿದೆ. ಅ.30ರಂದು ಮತದಾನ ಹಾಗೂ ನ.2 ಮತಗಳ ಎಣಿಕೆ ಕಾರ್ಯ ನಡೆದು ಫಲಿತಾಂಶ ಪ್ರಕಟವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net