ಚನ್ನಪಟ್ಟಣ ಉಪ ಚುನಾವಣೆ: ಅಖಾಡಕ್ಕಿಳಿದ ಸಿ.ಪಿ ಯೋಗೇಶ್ವರ್- ನಿಖಿಲ್ ಕುಮಾರಸ್ವಾಮಿ ನಡುವೆ ನೇರ ಹಣಾಹಣಿ | By Election

jds
Published on

ಬೆಂಗಳೂರು: ತಮ್ಮ ಎಂಎಲ್​ಸಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿ, ಕಾಂಗ್ರೆಸ್​ ಸೇರ್ಪಡೆಗೊಂಡಿರುವ ಸಿ.ಪಿ. ಯೋಗೇಶ್ವರ್, ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಕೈಜೋಡಿಸುವ ಮುಖೇನ ಇದೀಗ ಉಪ ಚುನಾವಣೆಯಲ್ಲಿ (By Election) ಚನ್ನಪಟ್ಟಣದಿಂದ ಸ್ಪರ್ಧಿಸಲು ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ. ಇನ್ನು ಇದೇ ಸಮಯದಲ್ಲಿ ಬಿಜೆಪಿ-ಜೆಡಿಎಸ್​ ಮೈತ್ರಿ ಅಭ್ಯರ್ಥಿಯಾಗಿ ಚನ್ನಪಟ್ಟಣಕ್ಕೆ ಯಾರನ್ನು ನಿಲ್ಲಿಸಬೇಕು ಎಂಬ ಗೊಂದಲ ಪಕ್ಷದಲ್ಲಿ ಮೂಡಿತ್ತು. ಈ ಕುರಿತು ಇಂದು ಸಭೆ ನಡೆಸಿದ ಜೆಡಿಎಸ್​, ಚನ್ನಪಟ್ಟಣಕ್ಕೆ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲು ದೃಢವಾಗಿ ನಿರ್ಧರಿಸಿದೆ.

ಅಂತಿಮವಾಗಿ ನಿಖಿಲ್​ ಹೆಸರನ್ನು ಘೋಷಣೆ

ಇಂದು ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರ ನಿವಾಸದಲ್ಲಿ ಚನ್ನಪಟ್ಟಣ ಉಪ ಚುನಾವಣೆಯ ಮೈತ್ರಿ ಅಭ್ಯರ್ಥಿಯಾಗಿ ಯಾರನ್ನು ಕಣಕ್ಕಿಳಿಸಬೇಕು ಎಂಬುದನ್ನು ಅಧಿಕೃತವಾಗಿ ಘೋಷಿಸಲು ಬಿಜೆಪಿ ಮತ್ತು ಜೆಡಿಎಸ್​ ನಾಯಕರು ಸಭೆ ನಡೆಸಿ, ಅಂತಿಮವಾಗಿ ನಿಖಿಲ್​ ಹೆಸರನ್ನು ಘೋಷಣೆ ಮಾಡಿದ್ದಾರೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿಯವರನ್ನು ನಿಲ್ಲಿಸಬೇಕು ಎಂದು ಜೆಡಿಎಸ್​ ಕಾರ್ಯಕರ್ತರು ಹಾಕಿದ ಒತ್ತಾಯಕ್ಕೆ ಮಣಿದು, ಇದೀಗ ಚನ್ನಪಟ್ಟಣ ಉಪಚುನಾವಣೆಗೆ ನಿಖಿಲ್​ರನ್ನು ಸ್ಪರ್ಧೆಗೆ ಇಳಿಸುತ್ತೇವೆ ಎಂದು ಮಾಜಿ ಸಿಎಂ, ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ನೇರ ಹಣಾಹಣಿ

ಒಂದೆಡೆ ಕಾಂಗ್ರೆಸ್​ ಪಡೆಯಿಂದ ಸಿ.ಪಿ. ಯೋಗೇಶ್ವರ್​ ಅಖಾಡಕ್ಕೆ ಧುಮುಕಿದರೆ, ಮತ್ತೊಂದೆಡೆ ಎನ್​ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಯಲಿದ್ದಾರೆ. ಇವರಿಬ್ಬರ ನಡುವೆ ಇದೀಗ ನೇರ ಹಣಾಹಣಿ ನಡೆಯಲಿದ್ದು, ಯಾರ ಭಾಗಕ್ಕೆ ಗೆಲುವು ಸಿಗಲಿದೆ ಎಂಬುದು ಸದ್ಯ ರಾಜ್ಯ ರಾಜಕೀಯದಲ್ಲಿ ದೊಡ್ಡ ಕುತೂಹಲವನ್ನೇ ಹುಟ್ಟುಹಾಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net