ಉಪ ಚುನಾವಣೆ; ಕೋಲಾಹಲ ಸೃಷ್ಟಿಸಿದ ಭ್ರಷ್ಟಾಚಾರ, ವಕ್ಫ್ ವಿವಾದ, ಕಣ್ಣೀರು|waqf dispute, tears created uproar

k54g681_eci_625x300_27_October_23.jpg
Published on

ಬೆಂಗಳೂರು: ರಾಜ್ಯದ ಮಿನಿ ಮಹಾಸಮರ ಎಂದೇ ಪರಿಗಣಿಸಲಾಗಿರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳ ಬಹಿರಂಗ ಪ್ರಚಾರಕ್ಕೆ ಸೋಮವಾರ ತೆರೆ(By-election campaigning ends on Monday) ಬೀಳಲಿದೆ. ಹೀಗಾಗಿ ರಾಜಕೀಯ ಪಕ್ಷಗಳ ಘಟಾನುಘಟಿ ನಾಯಕರೇ ಅಖಾಡಕ್ಕಿಳಿದು ಬಿರುಸಿನ ಪ್ರಚಾರದಲ್ಲಿ ನಡೆಸಿದ್ದಾರೆ.

ಮೂರೂ ಕ್ಷೇತ್ರಗಳ ಶಾಸಕರು ಲೋಕಸಭೆಗೆ ಆಯ್ಕೆಯಾಗಿರುವುದರಿಂದ ಈ ಚುನಾವಣೆ ಕದನ ಕಾವೇರಿದೆ. ಪರಸ್ಪರ ಜಿದ್ದಾಜಿದ್ದಿನ ವೇದಿಕೆಯಾಗಿ ಮಾರ್ಪಟ್ಟಿದೆ.

ಉಪ ಚುನಾವಣೆಯಾದರೂ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದದ್ದು ವಿಶೇಷ. ಆಡಳಿತ ಕಾಂಗ್ರೆಸ್ ಮತ್ತು ಎನ್‌ಡಿಎ ಮೈತ್ರಿ ಕೂಟದ ನಡುವಿನ ವಾಗ್ಯುದ್ಧ ರಣಾಂಗಣವನ್ನು ರೋಚಕತೆಗೆ ಕೊಂಡೊಯಿತು.

ಅಬಕಾರಿ ಇಲಾಖೆ ಭ್ರಷ್ಟಾಚಾರವಂತೂ ರಾಜ್ಯದಲ್ಲಿ ಮಾತ್ರವಲ್ಲದೇ ನೆರೆಯ ರಾಜ್ಯಗಳ ಚುನಾವಣೆ ಪ್ರಚಾರದಲ್ಲೂ ದೊಡ್ಡ ಸದ್ದು ಮಾಡಿತು. ಖುದ್ದು ಪ್ರಧಾನಿ ಮೋದಿ ಅವರೇ ಈ ವಿಷಯವನ್ನು ಪ್ರಸ್ತಾಪಿಸಿ ಕಾಂಗ್ರೆಸ್‌ನ ಭ್ರಷ್ಟಾಚಾರವನ್ನು ಜಗಜ್ಜಾಹೀರು ಮಾಡಿದರು.

ಇನ್ನು ಕಳೆದ ಒಂದೂವರೆ ತಿಂಗಳಿಂದ ರಾಜ್ಯದಲ್ಲಿ ಹೊತ್ತಿ ಉರಿಯುತ್ತಿದ್ದ ವಕ್ಫ್ ಆಸ್ತಿ ವಿವಾದ ಈ ಚುನಾವಣೆಯ ಪ್ರಚಾರದ ಪ್ರಮುಖ ಅಸ್ತವಾಗಿ ಪ್ರತಿಪಕ್ಷಗಳ ಕೈಗೆ ಸಿಕ್ಕಿತು.

ಚನ್ನಪಟ್ಟಣದಲ್ಲಿ ದೇವೇಗೌಡರ ಚುನಾವಣಾ ಪ್ರಚಾರ ಕಣ್ಣೀರ ‘ಧಾರೆ’ಯನ್ನೇ ಹರಿಸಿತು. ಮಾಜಿ ಸಂಸದ ಡಿ.ಕೆ.ಸುರೇಶ್ ಪ್ರಸ್ತಾಪಿಸಿದ ದೇವೇಗೌಡರ ಕಣ್ಣೀರಿನ ಬಗ್ಗೆ ಆಡಿದ ವ್ಯಂಗ್ಯದ ಮಾತು ು ಚುನಾವಣಾ ಕಣದಲ್ಲಿ ಕದನ ಕೋಲಾಹಲವನ್ನೇ ಸೃಷ್ಟಿಸಿತು. ವಾಲ್ಮೀಕಿ ನಿಗಮದ ಆರ್ಥಿಕ ಅವ್ಯವಹಾರ ಕೂಡ ಈ ಚುನಾವಣೆಯಲ್ಲಿ ದೊಡ್ಡ ಸದ್ದು ಮಾಡಿತು. ಪರಿಶಿಷ್ಟ ಪಂಗಡದ ಮತದಾರರು ಹೆಚ್ಚಿರುವ ಸಂಡೂರು ಕ್ಷೇತ್ರದಲ್ಲಿ ಇದೇ ವಿಷಯವನ್ನು ಬಿಜೆಪಿ ಮುಂದಿಟ್ಟು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ನಡೆಸಿತು. ಕಾಂಗ್ರೆಸ್ ಪರಿಶಿಷ್ಟ ವಿರೋಧಿ ಎಂಬುದನ್ನು ಬಿಂಬಿಸಲು ಒಳ ಮೀಸಲಾತಿ ವಿಚಾರವನ್ನೂ ಬಿಜೆಪಿ ನಾಯಕರು ಉಲ್ಲೇಖಿಸಿ ಮತಯುದ್ಧ ನಡೆಸಿದರು.

ಸಣ್ಣ ಸಮುದಾಯಗಳ ಮೇಲೆ ಕಣ್ಣು

ಮೂರೂ ಕ್ಷೇತ್ರಗಳಲ್ಲಿ ಬಲಾಢ್ಯ ಸಮುದಾಯಗಳು ನಿರ್ದಿಷ್ಟ ಪಕ್ಷವನ್ನು ಬೆಂಬಲಿಸುವ ಹಿನ್ನೆಲೆಯಲ್ಲಿ ಸಣ್ಣ ಮತ್ತು ಸೂಕ್ಷ್ಮ ಸಮುದಾಯಗಳನ್ನು ಬಿಜೆಪಿ ಗಂಭೀರವಾಗಿ ಈ ಚುನಾವಣೆಯಲ್ಲಿ ಪರಿಗಣಿಸಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಈ ಹಿಂದೆ ಕೆ.ಆರ್.ಪೇಟೆ, ಶಿರಾ, ಮಸ್ಕಿ ಚುನಾವಣೆಯಲ್ಲಿ ನಡೆಸಿದ ಪ್ರಯೋಗವನ್ನು ಈ ಚುನಾವಣೆಯಲ್ಲೂ ಬಳಸಿ ಲ ನಿರೀಕ್ಷೆಯಲ್ಲಿದ್ದಾರೆ.

ಚುನಾವಣೆ ದಿನೇ ದಿನೆ ರಂಗೇರುತ್ತಿದ್ದಂತೆ ಕಾಂಗ್ರೆಸ್ ಕೋವಿಡ್ ಹಗರಣದ ತನಿಖಾ ವರದಿ ಉಲ್ಲೇಶಿಸಿ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಸಚಿವ ಶ್ರೀರಾಮುಲು ಅವರನ್ನು ಕಟ್ಟಿ ಹಾಕುವ ಪ್ರಯತ್ನ ನಡೆಸಿತು. ಅದಕ್ಕೆ ಬಿಜೆಪಿ ಕೂಡ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿ ಕಾವನ್ನು ತಗ್ಗಿಸಿತು. ಒಟ್ಟಾರೆ ಕಾಂಗ್ರೆಸ್ ಮತ್ತು ಎನ್‌ಡಿಎ ಅಭ್ಯರ್ಥಿಗಳ ನಡುವಿನ ಅಗ್ನಿದಿವ್ಯಕ್ಕೆ ಸಾಕ್ಷಿಯಾಯಿತು.

ಘಟಾನುಘಟಿಗಳ ಪ್ರಚಾರ

ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಎಚ್.ಡಿ.ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಸಂಸದ ಜಗದೀಶ ಶೆಟ್ಟರ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಘಟಾನುಘಟಿ ದಂಡೇ ಚುನಾವಣಾ ಕ್ಷೇತ್ರದಲ್ಲಿದ್ದು ಅಬ್ಬರದ ಪ್ರಚಾರ ನಡೆಸಿ ಪರಸ್ಪರ ತೊಡೆ ತಟ್ಟಿದರು.

ವಿಶೇಷವೆಂದರೆ ಈ ಚುನಾವಣೆ ಭರಾಟೆಯಲ್ಲಿ ಪಕ್ಷೇತರರು ಕಾಣಿಸಿಕೊಳ್ಳುತ್ತಿಲ್ಲ. ಪಕ್ಷೇತರರಾಗಿ ಸ್ಪರ್ಧಿಸಿದವರ ಪ್ರಚಾರವೂ ಎಲ್ಲೂ ಎದ್ದು ಕಾಣುತ್ತಿಲ್ಲ. ಜತೆಗೆ ಈ ಸ್ಪರ್ಧಿಗಳನ್ನು ರಾಜಕೀಯ ಪಕ್ಷಗಳೂ ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಜಿದ್ದಾಜಿದ್ದಿಗೆ ಬಿದ್ದಿವೆ.

ಘಟಾನುಘಟಿ ನಾಯಕರು ರಣರಂಗವನ್ನು ರಂಗೇರಿಸಿದ್ದಾರೆ. ಸ್ಟಾರ್ ಪ್ರಚಾರಕರು, ಕ್ಷೇತ್ರಕ್ಕೆ ಸೇರದವರು ಸೋಮವಾರ ಸಂಜೆ ಹೊರ ಹೋಗಬೇಕಿದೆ. ಬಳಿಕ ಮನೆ ಮನೆ ಪ್ರಚಾರ ಶುರುವಾಗಲಿದೆ.

45 ಮಂದಿ ಚುನಾವಣಾ ಕಣದಲ್ಲಿ

ಚನ್ನಪಟ್ಟಣದಲ್ಲಿ ಎನ್‌ಡಿಎ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ, ಕಾಂಗ್ರೆಸ್‌ನಿಂದ ಸಿ.ಪಿ.ಯೋಗೇಶ್ವರ ಸೇರಿದಂತೆ 31 ಮಂದಿ ಕಣದಲ್ಲಿದ್ದಾರೆ. ಸಂಡೂರಿನಲ್ಲಿ ಕಾಂಗ್ರೆಸ್‌ನ ಇ.ಅನ್ನಪೂರ್ಣ, ಎನ್‌ಡಿಎ ಅಭ್ಯರ್ಥಿ ಬಂಗಾರ ಹನುಮಂತ ಒಳಗೊಂಡಂತೆ ಆರು ಮಂದಿ ಸ್ಪರ್ಧಿಸಿದ್ದಾರೆ. ಶಿಗ್ಗಾವಿಯಲ್ಲಿ ಎನ್‌ಡಿಎಯಿಂದ ಭರತ್ ಬೊಮ್ಮಾಯಿ, ಕಾಂಗ್ರೆಸ್‌ನಿಂದ ಪಠಾಣ್ ಯಾಸೀರ್ ಅಹ್ಮದ್‌ಖಾನ್ ಸೇರಿದಂತೆ ಎಂಟು ಮಂದಿ ಚುನಾವಣಾ ಕಣದಲ್ಲಿದ್ದಾರೆ.

ಮತದಾರರ ವಿವರ

ಶಿಗ್ಗಾವಿಯಲ್ಲಿ 1,21,443 ಪುರುಷ, 1,16,076 ಮಹಿಳಾ ಹಾಗೂ 6 ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ಒಟ್ಟು 2,37,525 ಮತದಾರರಿದ್ದಾರೆ. ಸಂಡೂರಿನಲ್ಲಿ 1,17,885 ಪುರುಷ, 1,18,435 ಮಹಿಳಾ ಮತ್ತು 29 ಲಿಂಗತ್ವ ಅಲ್ಪಸಂಖ್ಯಾತರು ಒಳಗೊಂಡಂತೆ 2,36,349 ಮತದಾರರಿದ್ದಾರೆ. ಚನ್ನಪಟ್ಟಣದಲ್ಲಿ 1,12,324 ಪುರುಷ, 1,29,617 ಮಹಿಳಾ, 8 ಲಿಂಗತ್ವ ಅಲ್ಪಸಂಖ್ಯಾತರು ಸೇರಿ 2,32,949 ಮತದಾರರಿದ್ದಾರೆ. ಮತದಾನ ನ.13 ರಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net