ರಾಜರಾಜೇಶ್ವರಿನಗರ, ಶಿರಾ ಬಿಜೆಪಿ ಟಿಕೆಟ್ ಸಸ್ಪೆನ್ಸ್

BJP LOGO
Published on

ಬೆಂಗಳೂರು: ಉಪಚುನಾವಣೆ ನಡೆಯಲಿರುವ ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ 2 ಹಾಗೂ ಶಿರಾ ಕ್ಷೇತ್ರಕ್ಕೆ 3 ಹೆಸರುಗಳು, 4 ವಿಧಾನಪರಿಷತ್ ಕ್ಷೇತ್ರಗಳಿಗೆ ತಲಾ 1 ಹೆಸರು ಕೇಂದ್ರ ಚುನಾವಣೆ ಸಮಿತಿಗೆ ಶಿಫಾರಸು. 6 ಕ್ಷೇತ್ರಗಳಿಗೆ ಚುನಾವಣಾ ಉಸ್ತುವಾರಿಗಳ ನೇಮಕ. ಭಾರತೀಯ ಜನತಾ ಪಕ್ಷದ ರಾಜ್ಯ ಕಚೇರಿಯಲ್ಲಿ ಗುರುವಾರ ಸಂಜೆ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳಿವು. ಇದರಿಂದಾಗಿ ಆರ್.ಆರ್.ನಗರದ ಸಂಭಾವ್ಯ ಅಭ್ಯರ್ಥಿ ಎಂದೇ ಬಿಂಬಿತ ಮುನಿರತ್ನ ಉದ್ವೇಗ ಹೆಚ್ಚಿಸಿದೆ. ಶಿರಾ ಟಿಕೆಟ್​ಗಾಗಿ ತೀವ್ರ ಜಿದ್ದಾಜಿದ್ದಿ ಏರ್ಪಟ್ಟಿರುವುದು ನಿಚ್ಚಳವಾಗಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊಟ್ಟ ಮಾತಿನಂತೆ ಮುನಿರತ್ನ ಏಕೈಕ ಹೆಸರನ್ನು ಕೇಂದ್ರ ಸಮಿತಿಗೆ ಶಿಫಾರಸು ಮಾಡಬೇಕೆಂದು ಪಟ್ಟು ಹಿಡಿದರೆ, ಪಕ್ಷದ ಹಳೆಯ ಕಾರ್ಯಕರ್ತರ ತುಳಸಿ ಮುನಿರಾಜುಗೌಡ ಕೂಡ ಆಕಾಂಕ್ಷಿಯಾಗಿದ್ದರಲ್ಲ? ಎಂದು ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್ ಮರು ಪ್ರಶ್ನಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರುವುದರಲ್ಲಿ ಮುನಿರತ್ನ ಕೊಡುಗೆ ಮರೆಯುವಂತಿಲ್ಲ. ಮುನಿರಾಜು ಗೌಡಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಕೊಡುತ್ತೇನೆಂದರೂ ಒಲ್ಲೆ ಎನ್ನುತ್ತಿದ್ದರೂ. ಪಕ್ಷ ಹಲವು ಬಾರಿ ಅವರಿಗೆ ಅವಕಾಶ ಕೊಟ್ಟಾಗಿದೆ. ಇನ್ನೇನು ಮಾಡಬೇಕು ನೀವೇ ಹೇಳಿ? ಎಂದು ಬಿಎಸ್​ವೈ ತಿರುಗಿ ಕೇಳಿದ್ದಾರೆ. ತೀವ್ರ ಚರ್ಚೆಯ ಬಳಿಕ ಇಬ್ಬರ ಹೆಸರನ್ನೂ ಕೇಂದ್ರ ಚುನಾವಣಾ ಸಮಿತಿಗೆ ಶಿಫಾರಸು ಮಾಡಿ ವರಿಷ್ಠರ ವಿವೇಚನೆಗೆ ಬಿಡುವುದು ಸೂಕ್ತವೆಂಬ ಅಂತಿಮ ನಿರ್ಧಾರಕ್ಕೆ ಬಂದಿತು ಎಂದು ಉನ್ನತ ಮೂಲಗಳು ತಿಳಿಸಿವೆ. ಶಿರಾ ವಿಷಯದಲ್ಲೂ ನಾಲ್ವರ ಮಧ್ಯೆ ಪೈಪೋಟಿಯಿದೆ. ಹಿಂದುಳಿದ ವರ್ಗಗಳಿಗೆ ಆದ್ಯತೆ ನೀಡಬೇಕೆಂಬ ಒತ್ತಾಯವೂ ಇದೆ. ಮೂವರ ಹೆಸರುಗಳನ್ನು ಶಿಫಾರಸು ಮಾಡಿ ಕೇಂದ್ರ ಸಮಿತಿ ಅಂತಿಮ ನಿರ್ಧಾರಕ್ಕೆ ಬಿಡಲು ಸಭೆಯಲ್ಲಿ ಸಹಮತ ವ್ಯಕ್ತವಾಗಿದೆ. ಇದನ್ನೂ ಓದಿ:  ಧನ್ವಂತರಿ: ಕರೊನಾದ ಅವಗುಣಗಳಲ್ಲಿ ಒಂದಿಷ್ಟು ಗುಣ…ಜಗತ್ತಿಗೇ ಶಿಸ್ತಿನ ಪಾಠ ಕಲಿಸಿದ ಕ್ಷಣ
ಕೇಂದ್ರ ಸಚಿವ ಜೋಶಿಗೆ ಬೆಳಗಾವಿ ಹೊಣೆ

ಸುರೇಶ ಅಂಗಡಿ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ವಸ್ತುಸ್ಥಿತಿ ಹಾಗೂ ಸಂಭಾವ್ಯ ಅಭ್ಯರ್ಥಿಗಳ ಕುರಿತು ವರದಿ ಸಲ್ಲಿಸುವ ಜವಾಬ್ದಾರಿಯನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿಗೆ ನೀಡಲಾಗಿದೆ. ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೂ ಪಕ್ಷದಿಂದ ಉಸ್ತುವಾರಿಗಳನ್ನು ನೇಮಿಸಲು ಕೋರ್ ಕಮಿಟಿ ಸಭೆ ನಿರ್ಧರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net