ಸೈಟ್, ಮನೆ, ಭೂಮಿ ಬೇಕಾದರೇ ಇಂದೇ ಖರೀದಿಸಿ; ಅಕ್ಟೋಬರ್ 1ರಿಂದ ಮಾರ್ಗಸೂಚಿ ದರ ಹೆಚ್ಚಳ

Kaveri F
Published on

ಬೆಂಗಳೂರು: ಸೈಟ್, ಕಟ್ಟಡ, ಭೂಮಿ ಸೇರಿದಂತೆ ಸ್ಥಿರಾಸ್ತಿ ಖರೀದಿಸಲು ಇಚ್ಛಿಸಿದ್ದರೆ ಇಂದೆ ಖರೀದಿಸಿ. ಇಲ್ಲವಾದರೆ, ಅಕ್ಟೋಬರ್ 1ರ ಬಳಿಕ ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ ಆಗಲಿದ್ದು, ಸಹಜವಾಗಿ ಮುದ್ರಾಂಕ ಮತ್ತು ನೋಂದಣಿ ಶುಲ್ಕ ದುಬಾರಿಯಾಗಲಿದೆ.

ರಾಜ್ಯದಲ್ಲಿ ಸ್ಥಿರಾಸ್ತಿಗಳ ಮೌಲ್ಯ ಪರಿಷ್ಕರಣೆಗೆ ಕಂದಾಯ ಇಲಾಖೆ ಈಗಾಗಲೇ ಅಧಿಕಾರಿಗಳ ಮತ್ತು ಉಪ ಸಮಿತಿಗಳ ಸಭೆಗಳನ್ನು ನಡೆಸುತ್ತಿದೆ. ಪ್ರಾಥಮಿಕ ಹಂತದ ಚರ್ಚೆ ನಡೆದಿದ್ದು, ಸೆಪ್ಟೆಂಬರ್‌ನಲ್ಲಿ ಪೂರ್ಣವಾಗಲಿದೆ. ಅಕ್ಟೋಬರ್ 1ಕ್ಕೆ ಪರಿಷ್ಕೃತ ಮಾರ್ಗಸೂಚಿ ಜಾರಿಗೆ ಬರಲಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆಸ್ತಿ ಖರೀದಿ ಒಂದು ರೀತಿಯ ಹೂಡಿಕೆ ಕೂಡ ಆಗಿರಲಿದೆ. ಅಲ್ಲದೇ ಆಸ್ತಿ ಮಾಲೀಕರಿಗೂ ಸೂಕ್ತವಾದ ನ್ಯಾಯಸಿಗಬೇಕಾಗುತ್ತದೆ. ಹಣದುಬ್ಬರ ಗಮನಿಸಿ ಮೌಲ್ಯ ನಿರ್ಧರಣೆಯಾಗಲಿದೆ. ಇನ್ನೊಂದೆಡೆ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ನೋಂದಣಿ ಆಗುವ ಕ್ರಯ ಪತ್ರಗಳಲ್ಲಿ ಉಲ್ಲೇಖಿಸುವ ಆಸ್ತಿ ಮೌಲ್ಯ ಮತ್ತು ಮಾರುಕಟ್ಟೆ ಮೌಲ್ಯದ ಮಾಹಿತಿಯನ್ನು ಪಡೆದು ಸ್ಥಿರಾಸ್ತಿ ಮೌಲ್ಯವನ್ನು ಪರಿಷ್ಕರಣೆ ಮಾಡಲಾಗುತ್ತದೆ. ಈ ಹಿಂದೆ ಕನಿಷ್ಠ ಶೇ.20 ರಿಂದ ಗರಿಷ್ಠ 30ರ ವರೆಗೂ ಮಾರ್ಗಸೂಚಿ ದರ ಪರಿಷ್ಕರಣೆ ಆಗಿದ್ದು, ಈ ಬಾರಿಯೂ ಮುಂದುವರಿಯಲಿದೆ ಎನ್ನಲಾಗಿದೆ.

ಇತ್ತೀಚಿನ ನೋಂದಣಿಗಳ ಡೇಟಾವನ್ನು ಪರಿಗಣಿಸಿ ಮಾರ್ಗಸೂಚಿದರ ನಿಗದಿ ಮಾಡುವಾಗ ಕೆಲವು ಪ್ರಮುಖ ಪ್ರದೇಶಗಳಲ್ಲಿ ಆಸ್ತಿ ಮೌಲ್ಯ ಸಹಜವಾಗಿ ಶೇ.70-80ರವರೆಗೂ ಹೆಚ್ಚಾಗಿರುವುದು ಕಂಡು ಬಂದಿದೆ. ನಗರೀಕರಣ, ಕೆಲವು ಪ್ರದೇಶಗಳ ಮೇಲಿನ ಜನರ ವ್ಯಾಮೋಹ, ಮೂಲಸೌಲಭ್ಯ ಹಾಗೂ ಸಂಪರ್ಕ ವ್ಯವಸ್ಥೆಯಿಂದ ವಸತಿ ಮತ್ತು ವಸತಿಯೇತರ ಪ್ರದೇಶದಲ್ಲಿ ಆಸ್ತಿ ಮೌಲ್ಯ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮಾರ್ಗಸೂಚಿದರಕ್ಕಿಂತ ಹೆಚ್ಚಿನ ಮೊತ್ತಕ್ಕೆ ಆಸ್ತಿ ಮಾರಾಟವಾದ ಆಗುತ್ತಿದ್ದು, ಇಂತಹ ಕಡೆ ಪರಿಷ್ಕೃತ ಮಾರ್ಗಸೂಚಿ ದರ ಗಣನೀಯವಾಗಿ ಹೆಚ್ಚಳವಾಗುವುದು.

ಅಕ್ಟೋಬರ್ 1ರ ಬಳಿಕ ನೋಂದಣಿಯಾಗುವ ಆಸ್ತಿಯ ಮುದ್ರಾಂಕ ಶುಲ್ಕ ಹೆಚ್ಚಳವಾಗುವುದು. ಸರ್ಕಾರದ ಬೊಕ್ಕಸಕ್ಕೂ ಆದಾಯ ಗಣನೀಯವಾಗಿ ಹೆಚ್ಚಳವಾಗಲಿದೆ. ಮುದ್ರಾಂಕ ಶುಲ್ಕ ಸ್ವತ್ತಿನ ಮಾರುಕಟ್ಟೆ ಅಥವಾ ಮಾರ್ಗಸೂಚಿ ದರದ ಮೌಲ್ಯದ ಶೇ.5 ಹಾಗೂ ನೋಂದಣಿ ಶುಲ್ಕ ಶೇ.1 ಮತ್ತು ಸೆಸ್ ಶೇ.05ರಷ್ಟು ನಿಗದಿಯಾಗಿದ್ದು. ಮಾರ್ಗಸೂಚಿ ದರ ಪರಿಷ್ಕರಣೆಯಾಗುತ್ತಿದೆ, ಖರೀದಿದಾರರಿಗೆ ಈ ಶುಲ್ಕದ ಹೊರೆ ಹೆಚ್ಚಾಗಲಿದೆ. ಹೀಗಾಗಿ ಅಕ್ಟೋಬರ್ 1ರ ಬಳಿಕ ಆಸ್ತಿ ಖರೀದಿಸುವವರು ಹೆಚ್ಚು ವೆಚ್ಚ ಮಾಡಬೇಕಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net