ಆಮೆಗಳ ಕಣ್ಣೀರನ್ನು ಕುಡಿಯುತ್ತವೆ ಈ ಚಿಟ್ಟೆಗಳು! ಇದರ ಹಿಂದಿರುವ ಕಾರಣ ತಿಳಿದ್ರೆ ಬೆರಗಾಗ್ತೀರಾ, ಇಲ್ಲಿವೆ ನೋಡಿ ಫೋಟೋಗಳು | Turtle Tears

ವಿಜಯವಾಣಿ - 2025-01-17T163732.838
Published on

Turtle Tears: ಜಗತ್ತಿನ ಸಕಲ ಜೀವರಾಶಿಗಳು ತನ್ನದೇ ಆದ ವೈಶಿಷ್ಟ್ಯ ಹಾಗೂ ವಿಶಿಷ್ಟತೆಗಳನ್ನು ಹೊಂದಿರುತ್ತವೆ. ಮೈಬಣ್ಣದಿಂದ ಹಿಡಿದು ನಡಿಗೆ, ಆಕ್ರಮಣಕಾರಿ ಸೇರಿದಂತೆ ಇನ್ನಿತರ ವಿಶೇಷತೆಗಳನ್ನು ಪಡೆದಿರುವ ಪ್ರಾಣಿ ಸಂಕುಲಗಳ ಆವಾಸ ಸ್ಥಾನದ ಬಗ್ಗೆ ತಿಳಿಯುವುದೇ ಒಂದು ಅಧ್ಯಯನ. ಪ್ರಪಂಚದಲ್ಲಿ ವಿಶೇಷ, ವಿಚಿತ್ರ ಎನಿಸುವ ಹಲವಾರು ಸಂಗತಿಗಳು ನಮಗೆ ಗೊತ್ತೇ ಇರುವುದಿಲ್ಲ. ಅಂತಹ ವಿಷಯಗಳ ಪೈಕಿ ಆಮೆಗಳ ಕಣ್ಣೀರನ್ನು ಕುಡಿಯುವ ಚಿಟ್ಟೆಗಳು ಕೂಡ ಒಂದು.

ತರಹೇವಾರಿ ಚಿಟ್ಟೆಗಳು

ಈ ಆಮೆಗಳು ನಾವು ನೋಡಿರುವ ಸಾಮಾನ್ಯ ಆಮೆಗಳಲ್ಲ. ಇವು ವಿಶೇಷವಾಗಿ ಅಮೇಜಾನ್ ಅರಣ್ಯ ಪ್ರದೇಶಗಳಲ್ಲಿ ಕಂಡುಬರುವ ಆಮೆಗಳು. ದಟ್ಟ ಅರಣ್ಯಗಳ ಮಧ್ಯೆ ಹರಿಯುವ ನೀರನ ದಂಡೆಯಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ. ಇಂತಹ ಆಮೆಗಳ ಕಣ್ಣಿನಿಂದ ಹರಿದುಬರುವ ನೀರನ್ನು ಕುಡಿಯಲು ತರಹೇವಾರಿ ಚಿಟ್ಟೆಗಳು ಹಾರಿಕೊಂಡು ಅದರತ್ತ ಬರುತ್ತವೆ. ಈ ಸಮಯದಲ್ಲಿ ತನ್ನ ಕಣ್ಣಿನ ಮೇಲೆ ಕುಳಿತು ಕಂಬನಿಯನ್ನು ಹೀರುವ ಚಿಟ್ಟೆಗಳಿಗೆ ಆಮೆಗಳು ಸಹಕರಿಸುತ್ತದೆಯೇ ವಿನಃ ಅಡ್ಡಿಪಡಿಸುವುದಿಲ್ಲ ಎಂಬುದು ಮತ್ತೊಂದು ಅಚ್ಚರಿಯ ಸಂಗತಿ.

ಸೂರ್ಯನ ಕಿರಣ

ಅಸಲಿಗೆ ಈ ಫೋಟೋ ಕ್ಲಿಕ್ಕಿಸಿದ ಉಷ್ಣವಲಯದ ಕೀಟಶಾಸ್ತ್ರಜ್ಞ ಮತ್ತು ವಿಜ್ಞಾನ ಸಂವಹನಕಾರ ಫಿಲ್ ಟೊರೆಸ್ ಮಾತನಾಡಿ, "ಮಾರ್ಚ್ ಆರಂಭದಲ್ಲಿ ಪೆರುವಿನ ಟ್ಯಾಂಬೋಪಾಟಾ ನದಿಯಲ್ಲಿ ಪ್ರಯಾಣಿಸುತ್ತಿದ್ದಾಗ ನದಿಯ ದಡದಲ್ಲಿ ಈ ದೃಶ್ಯವನ್ನು ಕಂಡೆ. ಕೆಲವು ಗಂಟೆಗಳ ಕಾಲ ಇದನ್ನೇ ದಿಟ್ಟಿಸಿ ನೋಡಿದ ನನಗೆ, ಅದರ ಫೋಟೋ ಕ್ಲಿಕ್ಕಿಸಿಕೊಳ್ಳಬೇಕು ಎನಿಸಿತು. ನಾನು ಕಂಡಾಗ ಮೂರು ಆಮೆಗಳು ಸೂರ್ಯನ ಕಿರಣಗಳನ್ನು ಅರಸುತ್ತ ನದಿಯ ದಂಡೆಯ ಮೇಲೆ ಬರುತ್ತಿತ್ತು. ಆಮೆಗಳ ತಲೆಯ ಮೇಲೆ ಸುತ್ತುವರಿದ ಹಲವಾರು ಜಾತಿಯ ಅದ್ಭುತ ಬಣ್ಣದ ಚಿಟ್ಟೆಗಳು, ಅದರ ಕಣ್ಣಿನಿಂದ ಹರಿದುಬರುತ್ತಿದ್ದ ಉಪ್ಪು ನೀರನ್ನು ಹೀರಲು ಮುಂದಾದವು. ಇದು ನಿಜಕ್ಕೂ ವಿಸ್ಮಯ" ಎಂದರು.

ಆಮೆಗಳಿಗೆ ಕಿರಿಕಿರಿ

"ಅಮೆಜಾನ್​ ಕಾಡಿನಲ್ಲಿ ಕಾಣಿಸಿಕೊಳ್ಳುವ ಈ ಆಮೆಗಳು ಸಾಧಾರಣ ಜೀವರಾಶಿಗಳಲ್ಲ. ಇದರ ಕಣ್ಣುಗಳಿಂದ ಉಪ್ಪು ನೀರು ಉತ್ಪತ್ತಿಯಾಗುತ್ತದೆ. ಅದರಲ್ಲಿ ಸೋಡಿಯಂ ಅಂಶವಿರುತ್ತದೆ. ಇದು ಇಲ್ಲಿನ ಜೀವಗಳಿಗೆ ಬಹುಮುಖ್ಯ ಮಿನರಲ್​. ಇದನ್ನು ಅರಸುತ್ತ ಬರುವ ಚಿಟ್ಟೆಗಳು ವಿಶೇಷವಾಗಿ ಹಳದಿ ಮೈಬಣ್ಣದ ಆಮೆಗಳನ್ನು ಹುಡುಕಿ, ಅವುಗಳ ಕಣ್ಣಿನಿಂದ ಉಪ್ಪು ನೀರನ್ನು ಕುಡಿಯುತ್ತವೆ. ಕೇವಲ ಚಿಟ್ಟೆಗಳು ಮಾತ್ರವಲ್ಲ ಜೇನು ನೊಣಗಳು ಕೂಡ ಬರುತ್ತವೆ. ಆದ್ರೆ, ಜೇನು ನೊಣಗಳ ವಿಪರೀತ ಹಾರಾಟದ ಶಬ್ದ ಆಮೆಗಳಿಗೆ ಕಿರಿಕಿರಿ ಅನಿಸುತ್ತದೆ. ಹೀಗಾಗಿ ಅವುಗಳು ಅಧಿಕ ಸಂಖ್ಯೆಯಲ್ಲಿ ಬರುವುದಿಲ್ಲ" ಎಂದು ಫಿಲ್ ಟೋರೆಸ್​ ತಮ್ಮ ಸಂಶೋಧನೆಯಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net