ಇನ್ನೊಂದು ತಿಂಗಳಲ್ಲಿ ಗ್ರಾಮೀಣ ಪತ್ರಕರ್ತರ ಕೈಗೆ ಬಸ್‌ಪಾಸ್

paper ditributors logo logo launch
ಶಿವಮೊಗ್ಗದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕೆ.ವಿ.ಪ್ರಭಾಕರ್, ಶಿವಾನಂದ ತಗಡೂರು, ಋಷಿಕೇಶ್ ಬಹಾದ್ದೂರ್ ದೇಸಾಯಿ, ಕೆ.ವಿ.ಶಿವಕುಮಾರ, ಸಿ.ಎಸ್.ಷಡಾಕ್ಷರಿ, ಎಚ್.ಬಿ.ಮದನಗೌಡ, ಆರ್.ಮಾರುತಿ ಇತರರಿದ್ದರು.
Published on

ಶಿವಮೊಗ್ಗ: ಗ್ರಾಮೀಣ ಭಾಗದ ಪತ್ರಕರ್ತರಿಗೆ ಉಚಿತ ಬಸ್‌ಪಾಸ್ ಹಾಗೂ ಪತ್ರಕರ್ತರು ಮತ್ತು ಅವರ ಕುಟುಂಬ ಸದಸ್ಯರಿಗೆ ಆರೋಗ್ಯ ವಿಮೆ ವ್ಯಾಪ್ತಿಗೆ ಒಳಪಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಶೀಘ್ರವೇ ಪತ್ರಕರ್ತರ ಮಹತ್ವದ ಬೇಡಿಕೆಗಳು ಈಡೇರಲಿವೆ ಎಂದು ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಶಿವಮೊಗ್ಗ ಜಿಲ್ಲಾ ಶಾಖೆ, ಶಿವಮೊಗ್ಗ ಪ್ರೆಸ್‌ಟ್ರಸ್ಟ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಪತ್ರಕರ್ತರಿಗೆ ಬಸ್‌ಪಾಸ್ ನೀಡುವ ಬಗ್ಗೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ. ಬಜೆಟ್‌ನಲ್ಲೂ ಹಣ ಮೀಸಲಿಟ್ಟಿದ್ದು ಮಾರ್ಗಸೂಚಿ ಸಿದ್ಧಪಡಿಸಲಾಗುತ್ತಿದೆ. ಇನ್ನೊಂದು ತಿಂಗಳಲ್ಲಿ ಬಸ್‌ಪಾಸ್ ಗ್ರಾಮೀಣ ಪತ್ರಕರ್ತರ ಕೈ ಸೇರಲಿದೆ. ಜತೆಗೆ ಪತ್ರಕರ್ತರ ಆರೋಗ್ಯ ವಿಮೆಗಾಗಿ ಸರ್ಕಾರದ ಬಳಿ 10 ಕೋಟಿ ರೂ. ಮೀಸಲಿದೆ. ಅದನ್ನು ಯಾವ ರೀತಿ ಬಳಕೆ ಮಾಡಿಕೊಳ್ಳಬೇಕು ಎಂಬುದಕ್ಕೆ ಮಾರ್ಗಸೂಚಿಗಳಿಲ್ಲ. ಪತ್ರಕರ್ತರು ಮತ್ತು ಅವರ ಕುಟುಂಬದವರಿಗೆ ಅನುಕೂಲವಾಗುವಂತೆ ಸಿಎಂ ಆರೋಗ್ಯ ವಿಮೆ ಜಾರಿಗೆ ತರಲಿದ್ದಾರೆ. ಈ ಸಂಬಂಧ ಪ್ರಕ್ರಿಯೆಗಳು ನಡೆದಿವೆ ಎಂದು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ನಕಲಿ, ಅಸಲಿ ಪತ್ರಕರ್ತರ ನಡುವೆ ಸಂಘರ್ಷ ಶುರುವಾಗಿದೆ. ಸುಳ್ಳು ಮತ್ತು ಜೊಳ್ಳುಗಳನ್ನು ಹೊರಗೆ ಹಾಕುವ ಪರಿಸ್ಥಿತಿ ಬಂದಿದೆ. ಸುದ್ದಿ ಮಾಧ್ಯಮಗಳ ಸುದ್ದಿಗಳ ವಿಶ್ವಾಸಾರ್ಹತೆ ಕಡಿಮೆಯಾಗಿದೆ. ಆದರೆ ಮುದ್ರಣ ಮಾಧ್ಯಮ ಮಾತ್ರ ಶೇ.60ಕ್ಕಿಂತ ಅಧಿಕ ವಿಶ್ವಾಸಾರ್ಹತೆ ಉಳಿಸಿಕೊಂಡಿದೆ ಎಂದರು.
ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ವಿ.ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಗೋಪಾಲ್ ಯಡಗೆರೆ ಆಶಯ ನುಡಿಗಳನ್ನಾಡಿದರು. ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿದರು.
ಸಿಎಂ ಮಾಧ್ಯಮ ಸಂಯೋಜಕ ಗಿರೀಶ್ ಕೋಟೆ, ಏಷ್ಯನ್ ಮೀಡಿಯಾ ಕಲ್ಚರಲ್ ಅಸೋಷಿಯೇಷನ್ ಭಾರತದ ಸಂಚಾಲಕ ಎಚ್.ಬಿ.ಮದನಗೌಡ, ಕಾರ್ಯಕಾರಿ ಸಮಿತಿ ಸದಸ್ಯ ಟೆಲೆಕ್ಸ್ ಎನ್.ರವಿಕುಮಾರ್, ರಾಷ್ಟ್ರೀಯ ಮಂಡಳಿ ಸದಸ್ಯ ಬಂಡಿಗಡಿ ನಂಜುಂಡಪ್ಪ, ಹಿರಿಯ ಸಹಾಯಕ ವಾರ್ತಾಧಿಕಾರಿ ಆರ್.ಮಾರುತಿ, ಸಂಘದ ಪ್ರಧಾನ ಕಾರ್ಯದರ್ಶಿ ವಿ.ಟಿ.ಅರುಣ್, ಹಿರಿಯ ಪತ್ರಕರ್ತರಾದ ನಾಗರಾಜ್ ನೇರಿಗೆ, ಹಾಲಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net