ಉದ್ಯಮ ಸಂಸ್ಥೆಗಳು ತೆಲಂಗಾಣಕ್ಕೆ ಲಗ್ಗೆ; ಸೂಕ್ತ ಸೌಲಭ್ಯಗಳು, ಶೀಘ್ರ ಪ್ರಕ್ರಿಯೆಯಿಂದ ಉದ್ಯಮಿಗಳು ಖುಷ್

KTR
Published on

| ರಾಘವ ಶರ್ಮ

ಕೈಗಾರಿಕಾ ಹೂಡಿಕೆಗಳ ಮೂಲಕ ಉದ್ಯೋಗ ಅವಕಾಶ ಹೆಚ್ಚಿಸಲು ತೆಲಂಗಾಣ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳು ಇತ್ತೀಚೆಗೆ ಉದ್ಯಮ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ. ದೇಶದ ಸುಪ್ರಸಿದ್ಧ ಉಡುಪು ತಯಾರಿಕಾ ಸಂಸ್ಥೆಯಾದ ಕಿಟೆಕ್ಸ್ ಕೇರಳ ಘಟಕ ಮುಚ್ಚಿ, ತೆಲಂಗಾಣದಲ್ಲಿ 2400 ಕೋಟಿ ರೂ. ಹೂಡಿಕೆ ಮೂಲಕ ಹೊಸ ಘಟಕ ತೆರೆಯಲು ಮುಂದಾಗಿರುವುದು ಇದಕ್ಕೊಂದು ತಾಜಾ ನಿದರ್ಶನ.

ಆಂಧ್ರಪ್ರದೇಶದಿಂದ ಬೇರ್ಪಟ್ಟು ಹೊಸ ರಾಜ್ಯವಾದ ಬಳಿಕ ಹೊಸ ಉದ್ಯಮಗಳನ್ನು ಆರಂಭಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಿರುವ ಕೈಗಾರಿಕೆ, ವಾಣಿಜ್ಯ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಕೆ.ಟಿ. ರಾಮರಾವ್, ಕಿಟೆಕ್ಸ್ ಸಂಸ್ಥೆ ತೆಲಂಗಾಣವನ್ನು ತನ್ನ ಹೂಡಿಕೆಯ ತಾಣವನ್ನಾಗಿ ಆಯ್ಕೆ ಮಾಡಿಕೊಂಡಿದ್ದು ಏಕೆ ಎಂಬುದನ್ನು ಇತ್ತೀಚೆಗೆ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ವೇಳೆ ವಿವರಿಸಿದರು.

‘ಕಿಟೆಕ್ಸ್ ಸಂಸ್ಥೆ ಕೇರಳ ಘಟಕ ಮುಚ್ಚುತ್ತಿರುವ ಬಗ್ಗೆ ಪತ್ರಿಕೆಗಳಲ್ಲಿ ಓದಿದ ಕೂಡಲೇ ಆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಾಬು ಎಂ. ಜೇಕಬ್ ಅವರಿಗೆ ಮೊಬೈಲ್ ಸಂದೇಶ ರವಾನಿಸಿ ನಿಮ್ಮೊಂದಿಗೆ ಮಾತನಾಡಬೇಕು ಎಂದು ಕೇಳಿಕೊಂಡೆ. ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಸಂದೇಶ ನಾನೇ ರವಾನಿಸಿದ್ದು ಎಂಬುದನ್ನು ಅವರು ಖಾತರಿಪಡಿಸಿಕೊಂಡ ಬಳಿಕ ಮಾರನೇ ದಿನವೇ ವಿಡಿಯೋ ಕಾನ್ಪರೆನ್ಸ್ ಮೂಲಕ ಪರಸ್ಪರ ಮಾತುಕತೆ ನಡೆಯಿತು. ತೆಲಂಗಾಣ ಸರ್ಕಾರದ ಅಭಿವೃದ್ಧಿಪರ ಧೋರಣೆಯಿಂದಾಗಿ ಉದ್ಯಮಿಗಳು ಯಾವುದೇ ಶೋಷಣೆ ಎದುರಿಸಬೇಕಿಲ್ಲ ಎಂಬುದನ್ನೂ ಮನವರಿಕೆ ಮಾಡಿದೆ. ಹೈದರಾಬಾದಿಗೆ ಬನ್ನಿ ಎಂದೂ ಆಹ್ವಾನಿಸಿದೆ. ಕರೊನಾ ಮಾರ್ಗಸೂಚಿಗಳ ಹಿನ್ನೆಲೆಯಲ್ಲಿ ಕೊಚ್ಚಿಯಿಂದ ಹೈದರಾಬಾದಿಗೆ ತಕ್ಷಣಕ್ಕೇ ಬರುವುದು ಕಷ್ಟವಲ್ಲವೇ ಎಂದಾಗ ನಾನೇ ವಿಶೇಷ ವಿಮಾನವನ್ನು ನಿಮ್ಮಲ್ಲಿಗೆ ಕಳುಹಿಸಿಕೊಡುವೆ. ನಿಮ್ಮ ತಂಡದೊಂದಿಗೆ ನೇರವಾಗಿ ಬಂದುಬಿಡಿ ಎಂದೂ ಹೇಳಿದೆ. ನನ್ನ ಮಾತನ್ನು ಕೇಳಿ ಆ ಕ್ಷಣಕ್ಕೆ ಕಕ್ಕಾಬಿಕ್ಕಿಯಾದರೂ, ಇದನ್ನು ನಾನು ಮಾಧ್ಯಮಕ್ಕೆ ತಿಳಿಸಬಹುದೇ ಎಂದು ಜೇಕಬ್ ಕೇಳಿಕೊಂಡರು. ವಿಮಾನ ಹತ್ತುವ ಮುನ್ನ ತಿಳಿಸಬೇಡಿ. ಏಕೆಂದರೆ, ನೀವು ಇಲ್ಲಿ ಬರುತ್ತಿದ್ದೀರಿ ಎಂಬುದು ಬಹಿರಂಗವಾದಲ್ಲಿ ಕೇರಳ ಸರ್ಕಾರ ನಿಮ್ಮ ಮನವೊಲಿಸಲು ಯತ್ನಿಸಬಹುದು. ನಾನು ಈ ಅವಕಾಶ ಕಳೆದುಕೊಳ್ಳಬಯಸುವುದಿಲ್ಲ ಎಂದು ನೇರವಾಗಿ ಹೇಳಿದೆ. ವಿಡಿಯೋ ಕಾನ್ಪರೆನ್ಸ್ ನಡೆದ 2 ದಿನಗಳ ಬಳಿಕವೇ ಅವರು ಹೈದರಾಬಾದಿನಲ್ಲಿದ್ದರು. ವಾರಂಗಲ್​ಗೆ ತೆರಳಿ ಹೂಡಿಕೆಯ ಸ್ಥಳ ವೀಕ್ಷಣೆಯನ್ನೂ ನಡೆಸಿದರು’ ಎಂದು ರಾಮರಾವ್ ಮಾಹಿತಿ ಹಂಚಿಕೊಂಡರು.

ತೆಲಂಗಾಣ ಸರ್ಕಾರದ ಸಕಾರಾತ್ಮ ಪ್ರತಿಕ್ರಿಯೆ, ಉದ್ಯಮ ಸಂಸ್ಥೆಗಳ ಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸಕ್ಕೆ ಮನಸೋತ ಸಾಬು ಜೇಕಬ್, ತಕ್ಷಣವೇ 1000 ಕೋಟಿ ರೂ. ಹೂಡಿಕೆಗೆ ಒಪ್ಪಿಕೊಂಡಿದ್ದಲ್ಲದೆ, 4000 ಉದ್ಯೋಗ ನಿರ್ವಣದ ಭರವಸೆಯನ್ನೂ ನೀಡಿದರು. ಈ ಎಲ್ಲ ಘಟನೆಗಳು ನಡೆದಿದ್ದು ಜೂನ್ ತಿಂಗಳಲ್ಲಿ. ಕೇರಳದ ಅಧಿಕಾರಶಾಹಿ ಹಾಗೂ ಸರ್ಕಾರದ ನಿರಂತರ ‘ಶೋಷಣೆ’ಯಿಂದ ಹೈರಾಣಾಗಿದ್ದ ಸಂಸ್ಥೆ ಆ ರಾಜ್ಯದಲ್ಲಿ ಮಾಡಲಾಗಿದ್ದ 3500 ಕೋಟಿ ರೂ. ಹೂಡಿಕೆಯನ್ನು ವಾಪಸ್ ತೆಗೆದುಕೊಂಡು, ತೆಲಂಗಾಣದಲ್ಲಿ ಹೊಸ ಭರವಸೆಯೊಂದಿಗೆ ಕಾರ್ಯಾರಂಭಕ್ಕೆ ಮುನ್ನುಡಿ ಬರೆದಿದೆ.

ಸಚಿವ ಕೆ.ಟಿ. ರಾಮರಾವ್ ಹಾಗೂ ಅಧಿಕಾರಿಗಳ ತಂಡದ ಕಾರ್ಯವೈಖರಿಯೇ ಇದಕ್ಕೆ ಕಾರಣ ಎಂದು ಹೇಳಿಕೊಂಡಿರುವ ಸಾಬು ಜೇಕಬ್, ಸಂಸ್ಥೆ ತನ್ನ ಹೂಡಿಕೆಯನ್ನು 1000 ಕೋಟಿ ರೂ.ಯಿಂದ 2400 ಕೋಟಿ ರೂ.ಗೆ ಏರಿಕೆ ಮಾಡಿದೆ. ರಂಗಾರೆಡ್ಡಿ ಜಿಲ್ಲೆಗೂ ಉದ್ಯಮ ವಿಸ್ತರಿಸಿದೆ ಎಂದು ಹೇಳಿದ್ದಾರೆ. ಇದರಿಂದಾಗಿ ಅಂದಾಜು 22 ಸಾವಿರ ಮಂದಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯೋಗ ಲಭಿಸಲಿದೆ ಎಂದೂ ತಿಳಿಸಿದ್ದಾರೆ. ಸೆ.13ರಂದು ಹೂಡಿಕೆ ಪ್ರಮಾಣ ಹೆಚ್ಚಳದ ಘೊಷಣೆ ಮಾಡಿರುವ ಸಂಸ್ಥೆ, ಸರ್ಕಾರದೊಂದಿಗೆ ಒಪ್ಪಂದಕ್ಕೂ ಸಹಿ ಹಾಕಿದೆ. ಕೇರಳದಲ್ಲಿ ಪದೇಪದೆ ನಮ್ಮ ಸಂಸ್ಥೆ ಮೇಲೆ ಅಧಿಕಾರಿಗಳ ಮೂಲಕ ದಾಳಿಗಳನ್ನು ನಡೆಸಲಾಗುತ್ತಿತ್ತು. ಜೂನ್ ತಿಂಗಳಲ್ಲಿ 11 ರೇಡ್​ಗಳನ್ನೂ (ತಪಾಸಣೆ) ಮಾಡಲಾಗಿತ್ತು. ಈ ಶೋಷಣೆಯಿಂದಾಗಿ ಸಂಸ್ಥೆ ಬೇಸತ್ತಿತ್ತು ಎನ್ನುತ್ತಾರೆ ಜೇಕಬ್. ಕೇರಳದಲ್ಲಿ ಉದ್ಯಮ ನಡೆಸುವುದೇ ಕಷ್ಟವಾಗುತ್ತಿದೆ. ಕಮ್ಯುನಿಸ್ಟ್ ಸರ್ಕಾರವಿರುವ ಕೇರಳದಲ್ಲಿ ಹತ್ತಾರು ಯೂನಿಯನ್​ಗಳಿವೆ. ಅಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಶಾಹಿಗಳನ್ನು ಸಂತೋಷ ಪಡಿಸದಿದ್ದರೆ ಉದ್ಯಮ ನಡೆಸಲು ಸಾಧ್ಯವೇ ಇಲ್ಲ! ಅವರು ಏನೇನನ್ನು ಕೇಳುತ್ತಾರೋ ಅದನ್ನು ಈಡೇರಿಸಲೇಬೇಕು. ಇಲ್ಲದಿದ್ದರೆ ಎಲ್ಲ ಕಡೆಯಿಂದಲೂ ಶೋಷಣೆ ಗಳನ್ನು ಎದುರಿಸುತ್ತಲೇ ಇರಬೇಕಾಗುತ್ತದೆ ಎಂದು ಅಸಮಾಧಾನ ಗೊಂಡೇ ಕಿಟೆಕ್ಸ್ ಸಂಸ್ಥೆ ತೆಲಂಗಾಣದ ಕಡೆ ಮುಖ ಮಾಡಿದೆ.

ಬರುತ್ತಿವೆ ಇತರ ಉದ್ಯಮಗಳು: ಕಿಟೆಕ್ಸ್ ಸಂಸ್ಥೆಗೆ ಸಿಕ್ಕ ರಾಜಾತಿಥ್ಯ ನೋಡಿ ಕೇರಳದಲ್ಲಿರುವ ಇತರ ಉದ್ಯಮ ಸಂಸ್ಥೆಗಳೂ ಈಗ ತೆಲಂಗಾಣ ಸರ್ಕಾರದೊಂದಿಗೆ ಮಾತುಕತೆಗೆ ಮುಂದಾಗಿವೆ. ಜೀವವಿಜ್ಞಾನ, ಆಹಾರ ಸಂಸ್ಕರಣೆ ಚಟುವಟಿಕೆ, ವೈದ್ಯಕೀಯ ಉಪಕರಣ ಕಂಪನಿಗಳು ಸೇರಿ ವಿವಿಧ ಮಾದರಿಯ ಉದ್ಯಮಗಳನ್ನು ನಡೆಸುತ್ತಿರುವ ಸಂಸ್ಥೆಗಳು ಆಸಕ್ತಿ ವ್ಯಕ್ತಪಡಿಸಿವೆ ಎಂದು ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಕಿಟೆಕ್ಸ್ ಸಂಸ್ಥೆ: ಕೈಟೆಕ್ಸ್ ಗಾರ್ವೆಂಟ್ಸ್ ಲಿಮಿಟೆಡ್ ಸಂಸ್ಥೆ ಉಡುಪುಗಳ ತಯಾರಿಕೆ ಮತ್ತು ರಫ್ತು ವ್ಯವಹಾರ ನಡೆಸುತ್ತಿದೆ. ವಿಶ್ವದಲ್ಲೇ ಅತಿ ಹೆಚ್ಚು ಮಕ್ಕಳ ಉಡುಪುಗಳನ್ನು ತಯಾರಿಸುವ ಸಂಸ್ಥೆಗಳಲ್ಲಿ ಕಿಟೆಕ್ಸ್​ಗೆ 2ನೇ ಸ್ಥಾನ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net