

ಮದ್ದೂರು: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಾರಿಗೆ ಒಕ್ಕೂಟಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರದಿಂದ ತಾಲೂಕಿನಲ್ಲಿ ಸಾರಿಗೆ ಬಸ್‌ಗಳ ಸಂಚಾರ ವಿರಳವಾಗಿತ್ತು.
ಚಾಲಕರು ಮತ್ತು ನಿರ್ವಾಹಕರು ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಗೈರು ಹಾಜರಾಗಿರುವ ಪರಿಣಾಮ ಬೆಳಗ್ಗೆ 6 ಗಂಟೆಯಿಂದಲೇ ಬಸ್ ಸಂಚಾರ ಸ್ಥಗಿತಗೊಂಡಿದ ಹಿನ್ನೆಲೆಯಲ್ಲಿ ಪ್ರಯಾಣಿಕರು ತೊಂದರೆಗೀಡಾದರು. ಆಗೊಂದು ಈಗೊಂದು ಸರ್ಕಾರಿ ಸಾರಿಗೆ ಬರುತ್ತಿದ್ದದ್ದು ಬಿಟ್ಟರೆ ಸಮರ್ಪಕವಾಗಿ ಸರ್ಕಾರಿ ಸಾರಿಗೆ ಬಸ್ ಬಾರದ ಕಾರಣ ಪ್ರಯಾಣಿಕರು ಸರ್ಕಾರಕ್ಕೆ ಹಿಡಿಶಾಪ ಹಾಕಿದರು.
ಇದರಿಂದಾಗಿ ಸಾರ್ವಜನಿಕರ ಪ್ರಯಾಣಕ್ಕೆ ತೀವ್ರ ತೊಂದರೆ ಉಂಟಾಯಿತು. ಸಾರಿಗೆ ಬಸ್‌ಗಳನ್ನೇ ಅವಲಂಬಿಸಿರುವ ಜನರು ಕೆಲಸ ಕಾರ್ಯಗಳಿಗೆ ಹಾಗೂ ಶಾಲಾ-ಕಾಲೇಜುಗಳಿಗೆ ಹೋಗಲು ಪರದಾಡುವ ಸ್ಥಿತಿ ನಿರ್ಮಾಣವಾಯಿತು.
ಅನಿರ್ದಿಷ್ಟಾವಧಿ ಪ್ರತಿಭಟನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಾರಿಗೆ ಅಧಿಕಾರಿಗಳು ಮದ್ದೂರು ಘಟಕದ ವತಿಯಿಂದ ಐವರು ಖಾಸಗಿ ಚಾಲಕರನ್ನು ನೇಮಕ ಮಾಡಿಕೊಂಡು ಬಸ್ ಚಾಲನೆಗೆ ಮುಂದಾಗಿದ್ದರು. ಆದರೆ, ನಿರ್ವಾಹಕರು ಗೈರು ಹಾಜರಾಗಿರುವ ಕಾರಣ ಟಿಕೆಟ್ ವಿತರಣೆ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಖಾಸಗಿ ಚಾಲಕರು ಬಸ್ ಚಾಲನೆಗೆ ಮುಂದಾಗಲಿಲ್ಲ.
ಸರ್ಕಾರಿ ಸಾರಿಗೆ ಬಂದ್ ಮಾಡಿರುವುದರಿಂದ ಖಾಸಗಿ ವಾಹನಗಳ ರಸ್ತೆಗಿಳಿದಿದ್ದು, ಪ್ರಯಾಣಿಕರು ಹೆಚ್ಚಿನ ಹಣ ನೀಡಿ ಪ್ರಯಾಣಿಸುವಂತ ಅನಿವಾರ್ಯತೆ ಎದುರಾಯಿತು.
ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ 1 ಕೆಎಸ್‌ಆರ್‌ಪಿ ತುಕಡಿ, ಹೆಚ್ಚಿನ ಸಿಬ್ಬಂದಿಯನ್ನು ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಶಿವಕುಮಾರ್ ನೇತೃತ್ವದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.