

ರಾಣೆಬೆನ್ನೂರ: ರಾಜ್ಯ ಸರ್ಕಾರ ಬಸ್ ದರ ಏರಿಕೆ ಮಾಡಿರುವುದನ್ನು ಖಂಡಿಸಿ ಹಾಗೂ ಬಸ್ ದರ ಇಳಿಕೆ ಮಾಡುವಂತೆ ಆಗ್ರಹಿಸಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗುರುವಾರ ನಗರದ ಮಿನಿ ವಿಧಾನಸೌಧ ಎದುರು ತಹಸೀಲ್ದಾರ್ ಆರ್.ಎಚ್. ಭಾಗವಾನ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸಂಘಟನೆಯ ತಾಲೂಕು ಅಧ್ಯಕ್ಷ ಚಂದ್ರಪ್ಪ ಬಣಕಾರ ಮಾತನಾಡಿ, ದಿನಬಳಕೆ ವಸ್ತುಗಳು, ಇಂಧನ ಬೆಲೆ, ದೈನಂದಿನ ಗೃಹ ಬಳಕೆ ವಸ್ತುಗಳ ಬೆಲೆ ಹೆಚ್ಚಳದಿಂದ ಸಾಮಾನ್ಯ ಜನರು ಹೈರಾಣಾಗಿದ್ದಾರೆ. ಇದೀಗ ಶೇ. 15ರಷ್ಟು ಬಸ್ ದರ ಏರಿಕೆ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ರಾಜ್ಯ ಸರ್ಕಾರದಿಂದ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಹಾಗೂ ಕೇಂದ್ರ ಸರ್ಕಾರದಿಂದ ತೆರಿಗೆ ಹೆಚ್ಚಳ ಎಂಬ ಕ್ರಮದಿಂದ ಬಡ ಹಾಗೂ ಮಧ್ಯಮ ವರ್ಗದ ಜನರು ಕುಟುಂಬ ನಿರ್ವಹಣೆ ಮಾಡುವುದು ದುಸ್ತರವಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಬಸ್ ದರ ಹೆಚ್ಚಳ ಹಿಂದಕ್ಕೆ ಪಡೆದು ಹಿಂದಿನ ದರ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ, ಕೊಟ್ರೇಶಪ್ಪ ಎಮ್ಮಿ, ಮಲ್ಲಿಕಾರ್ಜುನ ಸಾವಕ್ಕಳವರ, ಪರಶುರಾಮ ಕುರುವತ್ತಿ, ಶ್ರೀಧರ ಛಲವಾದಿ, ಬಾಷಾಸಾಬ್ ಹಂಪಾಪಟ್ಟಣ, ವಿರೂಪಾಕ್ಷ ಕೆಂಚನಗೌಡ್ರ, ರಿಯಾಜ್ಅಹ್ಮದ ದೊಡ್ಡಮನಿ, ನಾಗರಾಜ ದಾವಣಗೆರೆ, ಅಣ್ಣಪ್ಪ ಚಲವಾದಿ, ಮೃತ್ಯುಂಜಯ ಕರಿಯಜ್ಜಿ, ಪರಶುರಾಮ ಕೋಲಕಾರ, ಬಸವರಾಜ ದಳವಾಯಿ ಮತ್ತಿತರರು ಉಪಸ್ಥಿತರಿದ್ದರು.