

ರಾಣೆಬೆನ್ನೂರ: ಸಮರ್ಪಕವಾಗಿ ಬಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ತಾಲೂಕಿನ ಚೌಡಯ್ಯದಾನಪುರ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಬುಧವಾರ ಬಸ್ ತಡೆದು ಪ್ರತಿಭಟನೆ ನಡೆಸಿದರು.
ಮಾಗಳ ಗ್ರಾಮದಿಂದ ರಾಣೆಬೆನ್ನೂರಿಗೆ ತೆರಳುವ ಬಸ್ ಚೌಡಯ್ಯದಾನಪುರ ಗ್ರಾಮದ ಮಾರ್ಗವಾಗಿ ಬರುತ್ತದೆ. ಆದರೆ, ಮಾಗಳ ಬಸ್‌ನಲ್ಲಿ ಗುತ್ತಲ ಪಟ್ಟಣದಲ್ಲಿಯೇ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ತುಂಬಿಕೊಂಡಿರುತ್ತಾರೆ. ಹೀಗಿರುವಾಗ ಚೌಡಯ್ಯದಾನಪುರ ಗ್ರಾಮದಲ್ಲಿ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳಿಗೆ ಬಸ್ ಹತ್ತಲೂ ಜಾಗವಿರುವುದಿಲ್ಲ. ಆದ್ದರಿಂದ ನಮಗೆ ಬಸ್ ಬಂದರೂ ಹತ್ತಿ ಹೋಗಲು ಆಗುತ್ತಿಲ್ಲ.
ಜೀವದ ಹಂಗು ತೊರೆದು ನಿತ್ಯವೂ ಬಸ್‌ನ ಬಾಗಿಲಲ್ಲಿ ನಿಂತು ಪ್ರಯಾಣಿಸುವಂತಾಗಿದೆ. ಆದ್ದರಿಂದ ಬೆಳಗಿನ ಜಾವ 7 ಗಂಟೆಗೆ ನಮ್ಮ ಗ್ರಾಮಕ್ಕೆ ಬರುವ ಮಾಗಳ ಬಸ್ ನಮ್ಮೂರ ಪ್ರಯಾಣಿಕರನ್ನು ಹಾಗೂ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಬೇಕು. ಇದಕ್ಕೆ ಪರ್ಯಾಯ ವ್ಯವಸ್ಥೆ ಗುತ್ತಲದಿಂದ ಬಿಡುವ ಮಾಗಳ ಬಸ್ ಸಂದರ್ಭದಲ್ಲಿ ಹೆಚ್ಚುವರಿ ಬಸ್ ಬಿಡಬೇಕು. ಅದು ಚೌಡಯ್ಯದಾನಪುರ ಗ್ರಾಮದೊಳಗೆ ಬರುವಂತೆ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಇಂದು ನಾವು ಬಸ್ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಘಟನಾ ಸ್ಥಳಕ್ಕೆ ಬಂದ ಸಾರಿಗೆ ಘಟಕದ ವ್ಯವಸ್ಥಾಪಕ ಶಿವಮೂರ್ತಿ ಮಾತನಾಡಿ, ಚೌಡಯ್ಯದಾನಪುರ ಗ್ರಾಮಕ್ಕೆ ಮೊದಲು ಹೇಗೆ ಬಸ್‌ಗಳು ಓಡಾಡುತ್ತಿದ್ದವೋ ಹಾಗೆ ಬಸ್‌ಗಳನ್ನು ಓಡಿಸುತ್ತೇವೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.
ಗ್ರಾಪಂ ಸದಸ್ಯ ಚಂದ್ರಪ್ಪ ದಳವಾಯಿ, ಬೀರಪ್ಪ ಎರೇಶೀಮಿ, ಮಹೇಶ ತೇಲ್ಕರ, ಮಲ್ಲಿಕಾರ್ಜುನ ದೀಪಾವಳಿ, ರುದ್ರಪ್ಪ ಬನ್ನಿಮಟ್ಟಿ, ಮಹೇಶ ಭತ್ತದ, ಮಂಜುನಾಥ ಚಕ್ರಸಾಲಿ, ವಸಂತ ಹುಲ್ಮನಿ, ಶರಣಬಸಪ್ಪ ಚಕ್ರಸಾಲಿ ಸೇರಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.