

ಹೈದರಾಬಾದ್: ಬಸ್ಸಿನಲ್ಲಿ ಪ್ರಯಾಣಿಸುವಾಗ ಅಚಾತುರ್ಯದಿಂದ ಬ್ಯಾಗ್ ಅಥವಾ ಬೆಲೆ ಬಾಳುವ ವಸ್ತುಗಳನ್ನು ಇಳಿಯುವಾಗ ಮರೆತುಹೋಗಿದ್ದರೆ ಅದನ್ನು ಚಾಲಕ ಹಾಗೂ ನಿರ್ವಾಹಕ ಮಾಲೀಕರಿಗೆ ತಲುಪಿಸಿ ನಿಷ್ಠೆ ಮೆರೆದಿರುವ ಅನೇಕ ಘಟನೆಗಳನ್ನು ನಾವು ನೋಡಿದ್ದೇವೆ. ಆದರೆ, ಇಲ್ಲೊಬ್ಬ ಚಾಲಕ (Bus Driver) ತನ್ನ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ಯಾಸೆಂಜರ್ ಒಬ್ಬರಿಗೆ ಸೇರಿದ ಬೆಲೆಬಾಳುವ ವಸ್ತುವನ್ನು ಕದ್ದು ಸಿಕ್ಕಿಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆಯು ತೆಲಂಗಾಣದ (Telangana) ನಿಜಾಮಾಬಾದ್ನಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಚಾಲಕ ಬಸ್ (Bus Driver) ಓಡಿಸುತ್ತಿರುವಾಗ ತನ್ನ ಸೀಟಿನ ಪಕ್ಕ ಇರಿಸಲಾಗಿರುವ ಪ್ರಯಾಣಿಕರ ಬ್ಯಾಗಿನಿಂದ ಬೆಲೆ ಬಾಳುವ ವಸ್ತುಗಳನ್ನು ತೆಗೆದುಕೊಳ್ಳುತ್ತಿರುವುದನ್ನು ನೋಡಬಹುದಾಗಿದೆ. ಇದನ್ನು ಗಮನಿಸಿದ ಸಹ ಪ್ರಯಾಣಿಕರೊಬ್ಬರು ವಿಡಿಯೋ ಮಾಡಿ TGSRTC ಅಧಿಕಾರಿಗಳ ಗಮನಕ್ಕೆ ತಂದಿದ್ದು, ಕೂಡಲೇ ಇದನ್ನು ಪರಿಶೀಲಿಸಿದ ಅಧಿಕಾರಿಗಳು ಚಾಲಕನನ್ನು (Bus Driver) ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ TGSRTC ಹಿರಿಯ ಅಧಿಕಾರಿಯೊಬ್ಬರು, ಪ್ರಯಾಣಿಕರು ಯಾರಾದರು ಬೆಲೆಬಾಳುವ ವಸ್ತುಗಳನ್ನು ಬಸ್ಸಿನಲ್ಲಿ ಬಿಟ್ಟು ಹೋದಾಗ ಚಾಲಕ ಅಥವಾ ನಿರ್ವಾಹಕ ಅದನ್ನು ಡಿಪೋಗೆ ನೀಡಿ ಮೇಲಧಿಕಾರಿಗಳ ಗಮನಕ್ಕೆ ತರಬೇಕು. ನಾವು ಸಂಬಂಧಪಟ್ಟವರನ್ನು ಸಂಪರ್ಕಿಸಿ ಅದನ್ನು ತಲುಪಿಸುವ ಪ್ರಯತ್ನ ಮಾಡುತ್ತೇವೆ.
ಈ ಬಗ್ಗೆ ನಮ್ಮ ಗಮನಕ್ಕೆ ಬಂದು ಚಾಲಕನನ್ನು ವಿಚಾರಿಸಿದಾಗ ಆತ ಆಭರಣ ತನ್ನದೆಂದು ಹೇಳಿದ್ದ. ಆ ಬಳಿಕ ಪ್ರಯಾಣಿಕರ ಬ್ಯಾಗಿನಿಂದ ಕದ್ದಿದ್ದಾಗಿ ತಪ್ಪೊಪ್ಪಿಕೊಂಡ. ಕೂಡಲೇ ಆತನನ್ನುಸೇವೆಯಿಂದ ಅಮಾನತು ಮಾಡಲಾಗಿದ್ದು, ಆತನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ವಶಪಡಿಸಿಕೊಂಡಿರುವ ವಸ್ತುಗಳನ್ನು ಸಂಬಂಧಪಟ್ಟವರನ್ನು ಹುಡುಕಿ ತಲುಪಿಸಲಾಗುವುದು ಎಂದು TGSRTC ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.