ಅಕ್ಕಸಾಲಿಗನ ಮನೆಗೆ ನುಗ್ಗಿ ಕಳ್ಳತನ; ಇಬ್ಬರ ಸೆರೆ

arrested
Published on

ಬೆಂಗಳೂರು: ಚಿಕ್ಕಪೇಟೆಯ ಆರ್.ಟಿ. ಸ್ಟ್ರೀಟ್‌ನಲ್ಲಿ ಅಕ್ಕಸಾಲಿಗನ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದ ಇಬ್ಬರನ್ನು ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನ ಮೂಲದ ಅಜಯ್‌ರಾವ್ (24), ಸುನೀಲ್ ಸಿಂಗ್ (18) ಬಂಧಿತರು. ಮತ್ತೆ ಕೆಲವರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆಬೀಸಲಾಗಿದೆ. 20 ಗ್ರಾಂ ಚಿನ್ನ ಮತ್ತು ದೇಶಿ ಪಿಸ್ತೂಲ್ ಜಪ್ತಿ ಮಾಡಲಾಗಿದೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಎಸ್. ಗಿರೀಶ್ ಮಾಹಿತಿ ನೀಡಿದ್ದಾರೆ.

ದೂರುದಾರ ನಾಗರಾಜ್ ಸಿಂಧೆ ಎಂಬಾತ ಬಾಡಿಗೆ ಮನೆಯಲ್ಲಿ ಕುಟುಂಬದ ಜತೆಗೆ ನೆಲೆಸಿದ್ದು, ಬೆಳ್ಳಿ ಆಭರಣಗಳನ್ನು ಕರಗಿಸಿ ಗಟ್ಟಿ ಮಾಡುವ ಕೆಲಸ ಮಾಡುತ್ತಿದ್ದ. ಜ.24ರ ಮಧ್ಯಾಹ್ನ 3 ಗಂಟೆಯಲ್ಲಿ ನಾಲ್ವರು ದುಷ್ಕರ್ಮಿಗಳು ಏಕಾಏಕಿ ಮನೆಗೆ ನುಗ್ಗಿ ಪಿಸ್ತೂಲ್ ಮತ್ತು ಚಾಕು ತೋರಿಸಿ ಬೆದರಿಸಿ, ಹಲ್ಲೆ ನಡೆಸಿ ಕೈಗೆ ಸಿಕ್ಕ ಚಿನ್ನ, ಬೆಳ್ಳಿಯನ್ನು ಕಳವು ಮಾಡಿದ್ದರು.

ಈ ಬಗ್ಗೆ ನಾಗರಾಜ್ ಸಿಂಧೆ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಸಿಟಿ ಮಾರ್ಕೆಟ್ ಪೊಲೀಸರು, ಎಲ್ಲೆಡೆ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಆರೋಪಿಗಳ ಮುಖಚಹರೆ ಪತ್ತೆ ಆಗಿತ್ತು.

ಇದರ ಸುಳಿವಿನ ಮೇರೆಗೆ ರಾಜಸ್ಥಾನಕ್ಕೆ ರೈಲಿನಲ್ಲಿ ಪ್ರಯಾಣ ಬೆಳೆಸಿರುವುದು ಗೊತ್ತಾಗಿತ್ತು. ಬೆಳಗಾವಿ ರೈಲ್ವೆ ಪೊಲೀಸರು ಮತ್ತು ಸ್ಥಳೀಯ ಪೊಲೀಸರ ಸಹಾಯದಿಂದ ಬೆಳಗಾವಿಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಎಸ್. ಗಿರೀಶ್ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net