

ರಾಣೆಬೆನ್ನೂರ: ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ತಾಲೂಕಿನ ಕುಮಾರಪಟ್ಟಣ ಠಾಣೆ ಪೊಲೀಸರು ಆತನಿಂದ 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ದಾವಣಗೆರೆ ಅಮರಪ್ಪನ ತೋಟದ ನಿವಾಸಿ ಸನಾವುಲ್ಲಾ ಖಾದರಸಾಬ (56) ಬಂಧಿತ ಆರೋಪಿ. ಈತನಿಂದ 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ಹಾಗೂ 60 ಸಾವಿರ ರೂ. ಮೌಲ್ಯದ ಇತರ ಬೆಳೆಬಾಳುವ ವಸ್ತು ಜಪ್ತಿ ಮಾಡಲಾಗಿದೆ. ಆರೋಪಿಯು ಏಪ್ರಿಲ್ 24ರಂದು ಎಣ್ಣೆಹೊಸಳ್ಳಿ ಗ್ರಾಮದ ಹನುಮಂತಪ್ಪ ಪೂಜಾರ ಎಂಬುವರ ಮನೆ ಬಾಗಿಲ ಬೀಗ ಮುರಿದು ಒಳಗೆ ನುಗ್ಗಿ ಬರೋಬ್ಬರಿ 3.10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದ. ಈ ಕುರಿತು ಕುಮಾರಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಪತ್ತೆಗಾಗಿ ಎಸ್ಪಿ ಅಂಶಕುಮಾರ ಹಾಗೂ ಡಿವೈಎಸ್ಪಿ ಲೋಕೇಶ ಜೆ. ಮಾರ್ಗದರ್ಶನದಲ್ಲಿ ತಾಲೂಕಿನ ಕುಮಾರಪಟ್ಟಣ ಪಿಎಸ್ಐ ಪ್ರವಿಣಕುಮಾರ ವಾಲೀಕಾರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಕಾರ್ಯಾಚರಣೆ ನಡೆಸಿದ ತಂಡ ಆರೋಪಿಯನ್ನು ಪತ್ತೆ ಮಾಡಿದೆ. ಆರೋಪಿ ವಿರುದ್ಧ ಅರಸೀಕೆರೆ ಠಾಣೆ ವ್ಯಾಪ್ತಿಯಲ್ಲಿ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವ ಕುರಿತು ಪ್ರಕರಣ ದಾಖಲಾಗಿತ್ತು. ಅದನ್ನು ಸಹ ಇಲ್ಲಿಯ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಿಬ್ಬಂದಿಯಾದ ಎಚ್.ಎಂ. ತಹಸೀಲ್ದಾರ್, ಸಿ.ಸಿ. ಹಿಟಬುತ್ತಿ, ಇ.ಬಿ. ವಾಸನದ, ಬಿ.ವೈ. ತಹಸೀಲ್ದಾರ್, ಕೆ.ಕೆ. ಗಸ್ತೇರ, ಚಂದ್ರಶೇಖರ ಅಂಬಿಗೇರ ಮತ್ತಿತರರು ಕಾರ್ಯಾಚರಣೆಯಲ್ಲಿದ್ದರು.