

ನವದೆಹಲಿ: ಭಾರತಕ್ಕೆ 2023ರ ವೇಳೆಗೆ ಬುಲೆಟ್ ರೈಲು ತರಲು ಸಕಲ ಸಿದ್ಧತೆಗಳು ನಡೆಯುತ್ತಿದ್ದು, ವಿಸ್ತೃತ ಪ್ರಾಜೆಕ್ಟ್ ವರದಿ (ಡಿಪಿಆರ್) ಅನ್ನು ಸಿದ್ಧ ಮಾಡಲಾಗುತ್ತಿದೆ. ದೇಶದಲ್ಲಿ ಒಟ್ಟು ಆರು ಮಾರ್ಗಗಳಲ್ಲಿ ಬುಲೆಟ್ ರೈಲು ಬಿಡುವ ಚಿಂತನೆ ನಡೆಸಲಾಗಿದ್ದು, ಅದರಲ್ಲಿ ಮೈಸೂರು, ಬೆಂಗಳೂರು ಮತ್ತು ವಾರಾಣಸಿಯ ಹೆಸರೂ ಸಹ ಕೇಳಿಬಂದಿದೆ.
ಒಟ್ಟು ಆರು ಬುಲೆಟ್ ರೈಲುಗಳು ಭಾರತಕ್ಕೆ ಬರಲಿವೆ. ಡಿಪಿಆರ್ ಸಿದ್ಧವಾದ ನಂತರ ಅದಕ್ಕೆ ಹಣ ಮಂಜೂರು ಮಾಡುವುದಾಗಿ ಸರ್ಕಾರ ತಿಳಿಸಿದೆ. ಇಲಾಖೆಯ ವತಿಯಿಂದ ಡಿಪಿಆರ್ ಸಿದ್ಧವಾಗುತ್ತಿದ್ದು, ಹೆಚ್ಚಿನ ಜನ ಸಂಚಾರ ಇರುವ ಆರು ಪ್ರಮುಖ ಮಾರ್ಗಗಳಲ್ಲಿ ರೈಲನ್ನು ಬಿಡುವುದಾಗಿ ತಿಳಿಸಲಾಗಿದೆ. ಈಗಾಗಲೇ ಬುಲೆಟ್ ರೈಲು ಸಂಚಾರಕ್ಕೆ ನಿಗದಿ ಮಾಡಲಾಗಿರುವ ಮಾರ್ಗಗಳು ಇಂತಿವೆ.
1) ದೆಹಲಿ - ನೊಯ್ಡಾ - ಆಗ್ರಾ - ಲಖನೌ - ವಾರಾಣಸಿ (865 ಕಿ.ಮೀ)
2) ದೆಹಲಿ - ಜೈಪುರ - ಉದಯಪುರ - ಅಹಮದಾಬಾದ್ (886 ಕಿ.ಮೀ)
3) ಮುಂಬೈ - ನಾಸಿಕ್ - ನಾಗಪುರ (753 ಕಿ.ಮೀ)
4) ಮುಂಬೈ - ಪುಣೆ - ಹೈದರಾಬಾದ್ (711 ಕಿ.ಮೀ)
5) ಚೆನ್ನೈ - ಬೆಂಗಳೂರು - ಮೈಸೂರು (435 ಕಿ.ಮೀ)
6) ದೆಹಲಿ - ಚಂಡೀಗಢ - ಲುಧಿಯಾನಾ - ಜಲಾಂಧರ್ - ಅಮೃತಸರ ( 459 ಕಿ.ಮೀ)
ಈ ಎಲ್ಲ ಮಾರ್ಗಗಳಲ್ಲಿ ಸಂಚಾರ ಮಾಡಲಿರುವ ರೈಲುಗಳು ಹೈ-ಸ್ಪೀಡ್ (ಗಂಟೆಗೆ 300 ಕಿ.ಮೀ) ಅಥವಾ ಸೆಮಿ ಹೈ ಸ್ಪೀಡ್ (ಗಂಟೆಗೆ 160-250 ಕಿ.ಮೀ) ವೇಗದಲ್ಲಿ ಸಂಚರಿಸಲಿವೆ. (ಏಜೆನ್ಸೀಸ್)