ಚಿರತೆ ದಾಳಿಯಿಂದ ಗಾಯಗೊಂಡ ಎತ್ತು; ಆತಂಕಕ್ಕೀಡಾದ ಕಾಕೋಳ ಗ್ರಾಮಸ್ಥರು

1-RNR-09
Published on

ರಾಣೆಬೆನ್ನೂರ: ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ಎತ್ತಿನ ಮೇಲೆ ಚಿರತೆಯೊಂದು ದಾಳಿ ನಡೆಸಿದ ಘಟನೆ ತಾಲೂಕಿನ ಕಾಕೋಳ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ.
ಗ್ರಾಮದ ನಾಗಪ್ಪ ಮಲ್ಲಾಪುರ ಎಂಬುವರ ಎತ್ತು ಗಾಯಗೊಂಡಿರುವುದು.
ಇವರು ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ಸಮಯದಲ್ಲಿ ಏಕಾಏಕಿ ದಾಳಿ ನಡೆಸಿದ ಚಿರತೆ ಎತ್ತಿನ ಮೈ ಹರಿದಿದೆ. ರೈತ ನಾಗಪ್ಪ ಕೂಗಾಗುತ್ತಿದ್ದಂತೆ ಅಕ್ಕಪಕ್ಕದ ರೈತರು ಬಂದು ಕೂಗಾಡಿದ ಬಳಿಕ ಚಿರತೆ ಓಡಿ ಹೋಗಿದೆ. ಘಟನೆಯಿಂದ ಗಾಬರಿಗೊಂಡ ರೈತರು ಕೂಡಲೇ ಮನೆಗಳತ್ತ ಮುಖ ಮಾಡಿದ್ದಾರೆ.
ಚಿರತೆ ಹಿಡಿಯಲು ಪಟ್ಟು…
ಗಾಯಗೊಂಡ ಎತ್ತನ್ನು ಗ್ರಾಮದ ಸರ್ಕಾರಿ ಪಶು ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಘಟನೆಯಿಂದ ಎತ್ತು ಹೆಚ್ಚಿನ ಪ್ರಮಾಣದಲ್ಲಿ ಗಾಯಗೊಂಡಿದ್ದು, ಅರಣ್ಯ ಇಲಾಖೆಯಿಂದ ಪರಿಹಾರ ನೀಡಬೇಕು. ಕೂಡಲೇ ಚಿರತೆ ಹಿಡಿಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದರು. ಸ್ಥಳಕ್ಕೆ ಬಂದ ವಲಯ ಅರಣ್ಯಧಿಕಾರಿ ಕಿರಣಕುಮಾರ ಕಲ್ಲಮ್ಮನವರ ಮಾತನಾಡಿ, ಚಿರತೆ ಹಿಡಿಯಲು ಕೂಡಲೇ ಬೋನ್ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net