ಕಟ್ಟಡ ಕುಸಿತ: ನಾಲ್ವರ ಸಾವು, ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ |Building Collapse

Building Collapse
Published on

ನವದೆಹಲಿ: ದೆಹಲಿಯ ಮುಸ್ತಫಾಬಾದ್​​ನಲ್ಲಿ ಇಂದು ನಸುಕಿನ ಜಾವ 4 ಅಂತಸ್ತಿನ ಕಟ್ಟಡ ಕುಸಿದು ಬಿದ್ದು ನಾಲ್ವರು ಮೃತಪಟ್ಟಿರುವ ಘಟನೆ ನಡೆದಿದೆ. ಈ ದುರಂತದಲ್ಲಿ ಹಲವರು ಅವಶೇಷಗಳಡಿ ಸಿಲುಕಿದ್ದು, ಇದುವರೆಗೆ 18 ಮಂದಿಯನ್ನು ರಕ್ಷಿಸಲಾಗಿದೆ. ಆದರೆ ಇನ್ನೂ ಕೆಲವರು ಅವಶೇಷಗಳ ಅಡಿ ಸಿಲುಕಿರುವ ಸಾಧ್ಯತೆಯಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈಶಾನ್ಯ ದೆಹಲಿಯ ದಯಾಲ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮೃತಪಟ್ಟವರನ್ನು ಚಾಂದಿನಿ, ದಾನಿಶ್, ರೇಷ್ಮಾ ಮತ್ತು ನವೀದ್ ಎಂದು ಗುರುತಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ದೆಹಲಿ ಪೊಲೀಸರ ತಂಡಗಳು ಸ್ಥಳದಲ್ಲಿ ರಕ್ಷಣಾ ಕಾರ್ಯಚರಣೆ ನಡೆಯುತ್ತದೆ.

ಶನಿವಾರ ಬೆಳಗಿನ ಜಾವ 2:30 ರ ಸುಮಾರಿಗೆ ಸ್ಥಳೀಯ ನಿವಾಸಿಯೊಬ್ಬರು ಹಂಚಿಕೊಂಡ ಸಿಸಿಟಿವಿ ದೃಶ್ಯದಲ್ಲಿ, ಕಟ್ಟಡ ಕುಸಿದು ಬಿದ್ದ ಕ್ಷಣ ನಿಖರವಾಗಿ ಸೆರೆಯಾಗಿದೆ. ಕಟ್ಟಡ ಕುಸಿದ ಸ್ವಲ್ಪ ಸಮಯದ ನಂತರ ಅಲ್ಲಿ ಭಾರಿ ಗಾಳಿ ಮತ್ತು ಧೂಳು ಬೀಸುತ್ತಿರುವುದನ್ನು ಕಾಣಬಹುದು.

ಈ ದುರ್ಘಟನೆಯಲ್ಲಿ ಸುಮಾರು 24 ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದು, ಅವರಲ್ಲಿ 18 ಮಂದಿಯನ್ನ ರಕ್ಷಿಸಲಾಗಿದೆ. ಅವರಲ್ಲಿ ತೀವ್ರವಾಗಿ ಗಾಯಗೊಂಡಿದ್ದ 14 ಮಂದಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಕೆಲವರು ಅವಶೇಷಗಳಡಿಯಲ್ಲಿ ಹೂತು ಹೋಗಿರಬಹುದು ಎಂದು ಪೊಲೀಸರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net