

ಮೂಡಿಗೆರೆ: ಶಿಕ್ಷಕರ ಸೇವೆಯಿಂದ ಸುಸಂಸ್ಕೃತ ಸಮಾಜ ನಿರ್ಮಾಣವಾಗಿದ್ದು, ಶಿಕ್ಷಕ ಮತ್ತು ವಿದ್ಯಾರ್ಥಿಯ ಸಂಬಂಧ ಜನ್ಮ ಕಳೆದರೂ ಮುಗಿಯದ ಋಣಾನುಬಂಧ ಎಂದು ಉಪಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.
ಶಿಕ್ಷಣ ಇಲಾಖೆ ಮಂಗಳವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದಾರಿಯಲ್ಲಿ ಬಿದ್ದಿರುವ ಕಲ್ಲನ್ನು ಕೆತ್ತನೆ ಮಾಡಿ ಅದನ್ನು ಸುಂದರ ಶಿಲೆಯಾಗಿ ರೂಪಿಸುವಂತೆ ಏನೂ ಅರಿಯದ ಕಂದಮ್ಮಗಳನ್ನು ಶಾಲೆಗೆ ಸೇರಿಸಿದ ಬಳಿಕ ಅವರಿಗೆ ಅಕ್ಷರ ಕಲಿಸಿ ಉತ್ತಮ ನಾಗರಿಕರನ್ನಾಗಿ ಮಾಡುವ ಮಹತ್ವದ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಸೇವಾ ಅವಧಿಯಲ್ಲಿ ಸಾವಿರಾರು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಿ ಉತ್ತಮ ಪ್ರಜೆಗಳಾಗಿ ರೂಪಿಸುವ ಹೆಗ್ಗಳಿಕೆಗೆ ಶಿಕ್ಷಕರ ಮೇಲಿದೆ. ಕರ್ತವ್ಯ ನಿಭಾಯಿಸುವಾಗ ಎದುರಾಗುವ ಅನೇಕ ಕಷ್ಟಗಳನ್ನು ಗುರುವಿನ ಸ್ಥಾನದಲ್ಲಿ ನಿಂತು ಬಗೆಹರಿಸಿ ಕರ್ತವ್ಯ ನಿಭಾಯಿಸುವುದು ಅತ್ಯುತ್ತಮ ಶಿಕ್ಷಕರ ಜವಾಬ್ದಾರಿ. ತಾನು ಪಾಠ ಕಲಿಸಿದ ಶಿಷ್ಯ ತನಗಿಂತ ಉನ್ನತ ಸ್ಥಾನಪಡೆದಾಗ ಆನಂದ ಪಡುವ ಶಿಕ್ಷಕರಿಂದ ಸಮಾಜದಲ್ಲಿ ಶಾಂತಿ, ಪ್ರೀತಿ, ಸೌಹಾರ್ದತೆ, ಸಹಬಾಳ್ವೆ ಜೀವನ ಇನ್ನೂ ಮುಂದುವರಿದಿದೆ ಎಂದರು.
ಶಾಸಕಿ ನಯನಾ ಮೋಟಮ್ಮ ಮಾತನಾಡಿ, ಹಿಂದಿನ ಮತ್ತು ಆಧುನಿಕ ಪದ್ಧತಿ ಶಿಕ್ಷಣಕ್ಕೆ ವ್ಯತ್ಯಾಸವಿದೆ. ಹಿಂದೆ ಹಳ್ಳಿಯಿಂದ ವಿದ್ಯಾರ್ಥಿಗಳು ನಾಲ್ಕೈದು ಕಿ.ಮೀ. ಕಾಲ್ನಡಿಗೆಯಲ್ಲಿ ಶಾಲೆಗೆ ಹೋಗಿ ಶಿಕ್ಷಣ ಪಡೆಯುತ್ತಿದ್ದರು. ಈಗ ಗ್ರಾಮೀಣ ಭಾಗದ ಶಾಲೆಯಲ್ಲಿ ಕೂಡ ಉತ್ತಮ ಶಿಕ್ಷಣ ದೊರಕುತ್ತಿದೆ. ಸ್ಮಾರ್ಟಕ್ಲಾಸ್‌ನಂತಹ ಅತ್ಯಾಧುನಿಕ ಶಿಕ್ಷಣ ವ್ಯವಸ್ಥೆ ಪ್ರತಿ ವಿದ್ಯಾರ್ಥಿಗಳನ್ನು ತಲುಪುತ್ತಿದೆ. ಹಿಂದಿನ ಪದ್ಧತಿ ಶಿಕ್ಷಣ ಪಡೆದು ಶಿಕ್ಷಕರಾಗಿರುವವರು ಕೂಡ ಈಗಿನ ಆಧುನಿಕ ಪದ್ಧತಿ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಕಲಿಸಲು ಮುಂದಾಗಿರುವುದರಿಂದ ವಿದ್ಯಾರ್ಥಿಗಳು ಆಧುನಿಕ ಶಿಕ್ಷಣ ಪಡೆದು ಉತ್ತಮ ಪ್ರಜೆಗಳಾಗಿ ಹೊರ ಬರುತ್ತಿದ್ದಾರೆ. ಇದು ನಮ್ಮ ಹೆಮ್ಮೆಯ ಶಿಕ್ಷಕರಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.
ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಪಪಂ ಸದಸ್ಯರಾದ ಎಚ್.ಪಿ.ರಮೇಶ್, ಎಂ.ಎ.ಹಂಝ, ಗೀತಾ ಅಜಿತ್, ಕಮಲಾಕ್ಷಿ, ಮನೋಜ್ ಕುಮಾರ್, ಆಶಾ ಮೋಹನ್, ಖುರ್ಷಿದ ಬಾನು, ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತರಾಜ್, ಸಾಹಿತಿ ರೇಖಾ ನಾಗರಾಜ್ ಕಲ್ಕಟ್ಟೆ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಕೆ.ಬಿ.ಶ್ರೀನಿವಾಸ್, ಪದ್ಮರಾಜ್ ಇದ್ದರು.