ಕೌಶಲವಿದ್ರೆ ಉತ್ತಮ ಭವಿಷ್ಯ ನಿರ್ಮಾಣ: ಬಿ.ವೈ.ರಾಘವೇಂದ್ರ

nandi vidya samste pratiba puraskara
ಶಿವಮೊಗ್ಗದಲ್ಲಿ ನಂದಿ ವಿದ್ಯಾಸಂಸ್ಥೆಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಭಾವಂತರನ್ನು ಪುರಸ್ಕರಿಸಲಾಯಿತು. ಸಿದ್ದರಾಮೇಶ್ವರ ಶಿವಾಚಾರ್ಯ ಶ್ರೀ, ಬಿ.ವೈ.ರಾಘವೇಂದ್ರ, ರುದ್ರಮುನಿ ಸಜ್ಜನ್, ಜೆ.ಸುಮತಿ, ರಮೇಶ್, ಕುಬೇರಪ್ಪ ಇತರರಿದ್ದರು.
Published on

ಶಿವಮೊಗ್ಗ: ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅಂಕಪಟ್ಟಿ ಅಥವಾ ಮೆರಿಟ್ ಜತೆಗೆ ಕೌಶಲವೂ ಅಗತ್ಯ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಸರ್ಕಾರಿ ನೌಕರರ ಭವನದಲ್ಲಿ ನೊಳಂಬ ಲಿಂಗಾಯತ ಸಮಾಜದ ನಂದಿ ವಿದ್ಯಾಸಂಸ್ಥೆಯಿಂದ ಭಾನುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ಯುವ ಪೀಳಿಗೆಗೆ ವಿಪುಲ ಉದ್ಯೋಗ ಅವಕಾಶಗಳಿವೆ. ಆದರೆ ಅವುಗಳನ್ನು ಬಳಕೆ ಮಾಡಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಅದಕ್ಕೆ ಕಾರಣ ಕೌಶಲದ ಕೊರತೆ ಎಂದು ತಿಳಿಸಿದರು.
ನಮ್ಮ ವಿದ್ಯಾಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕರ 18 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದೆವು. 500ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಕೆಲವರು ಐಟಿ ಕಂಪನಿಗಳನ್ನು ತೊರೆದು ಬರಲು ಸಿದ್ಧರಾಗಿದ್ದರು. ಉತ್ತಮ ಅಂಕ ಪಡೆದ ಬಹಳಷ್ಟು ಮಂದಿ ಇದ್ದರು. ಆದರೆ ನಾವಂದುಕೊಂಡಂತೆ ಆ ನಿಗದಿತ ಹುದ್ದೆಗಳು ಭರ್ತಿ ಆಗಲಿಲ್ಲ. ಉದ್ಯೋಗಕ್ಕೆ ಬೇಕಿರುವ ಕೌಶಲ ಅವರಲ್ಲಿ ಇರಲಿಲ್ಲ ಎಂದು ತಿಳಿಸಿದರು.
ಇಂದು ಡಿಜಿಟಲ್ ಅರೆಸ್ಟ್ ಪ್ರಕರಣಗಳು ಹೆಚ್ಚಾಗುತ್ತಿವೆ. ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗುತ್ತಿದೆ. ಓದಿಗೆ ಮಾತ್ರ ಬಳಕೆ ಮಾಡಿಕೊಳ್ಳದೆ ಅನ್ಯ ಉದ್ದೇಶಕ್ಕೆ ಬಳಕೆಯಾಗುತ್ತಿದೆ. ಅವರಿಗೆ ಆಟ-ಪಾಠ, ಸಹಪಾಠಿಗಳು ಬೇಕಿಲ್ಲ. ಸಾರ್ವಜನಿಕ ಸಭೆ, ಧಾರ್ಮಿಕ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಮನಸ್ಥಿತಿ ಕಡಿಮೆ ಆಗುತ್ತಿದೆ. ಪಾಲಕರು ಈ ದಿಸೆಯಲ್ಲಿ ಗಮನ ಹರಿಸಬೇಕು. ವಿದ್ಯೆ ಜತೆ ಇತರೆ ಚಟುವಟಿಕೆಗಳೂ ಜೀವನಕ್ಕೆ ಮುಖ್ಯವಾಗುತ್ತವೆ ಎಂಬುದನ್ನು ಮರೆಯಬಾರದು ಎಂದರು.
ದೇಶದಲ್ಲಿ ಶೇ.75ಕ್ಕಿಂತ ಮೇಲ್ಪಟ್ಟು ಕೃಷಿ ಆಧಾರಿತ ಉದ್ಯೋಗಾವಕಾಶಗಳಿವೆ. ಹಣ ಉಳ್ಳವರೇ ಶಕ್ತಿವಂತರು ಎಂಬ ಕಾಲವೊಂದಿತ್ತು. ಈಗ ಅದು ಜ್ಞಾನ ಇದ್ದವರೇ ಶಕ್ತಿವಂತರು ಎಂಬಂತಾಗಿದೆ. ಶಿವಮೊಗ್ಗ ಜಿಲ್ಲೆ ಮಧ್ಯ ಕರ್ನಾಟಕ ಭಾಗದಲ್ಲಿ ವೇಗವಾಗಿ ಬೆಳೆಯುತ್ತಿದೆ. ಈಗಾಗಲೇ ವೈದ್ಯಕೀಯ, ಆಯುರ್ವೇದ ಕಾಲೇಜು, ಪಶು ಮಹಾವಿದ್ಯಾಲಯ, ರಾಷ್ಟ್ರೀಯ ರಕ್ಷಾ ವಿವಿ ಒಳಗೊಂಡಂತೆ ಶೈಕ್ಷಣಿಕ ಹಬ್ ಆಗಿದೆ. ಈ ಮೂಲಕ ಉದ್ಯೋಗಕ್ಕೂ ಅವಕಾಶಗಳನ್ನು ತೆರೆದಿಟ್ಟಿದೆ ಎಂದು ಹೇಳಿದರು.
ಹರಿಹರ ತಾಲೂಕು ನಂದಿಗುಡಿಯ ವೃಷಭಪುರಿ ಸಂಸ್ಥಾನದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಂದಿ ವಿದ್ಯಾಸಂಸ್ಥೆ ಅಧ್ಯಕ್ಷ ಡಿ.ಬಿ.ಶಂಕರಪ್ಪ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್, ಕಸಾಪ ದಾವಣಗೆರೆ ತಾಲೂಕು ಅಧ್ಯಕ್ಷೆ ಜೆ.ಸುಮತಿ, ರಮೇಶ್, ಕುಬೇರಪ್ಪ, ಸುರೇಶ್, ಪಿ.ರುದ್ರೇಶ್ ಉಪಸ್ಥಿತರಿದ್ದರು.

ಸಾಧಕರಿಗೆ ಸನ್ಮಾನ, ವಿಶೇಷ ಪುರಸ್ಕಾರ
ಶ್ರೇಷ್ಠ ವೈದ್ಯಾಧಿಕಾರಿ ಪುರಸ್ಕೃತ ಡಾ. ಜಿ.ಬಿ.ಚಂದ್ರಪ್ಪ, ಕೃಷಿ ಸಂಶೋಧನೆಯಲ್ಲಿ ರಾಷ್ಟ್ರೀಯ ಪುರಸ್ಕಾರ ಪಡೆದ ಡಾ. ಎಂ.ವಿ.ಧನಂಜಯ, ತಾಂತ್ರಿಕ ಶಿಕ್ಷಣ ಪ್ರಚಾರಕ ಬಿ.ಎಸ್.ಶಿವಪ್ರಕಾಶ್, ಶಂಕರಘಟ್ಟದ ಎಸ್.ಬಸವರಾಜ್, ಎಸ್.ಸಿ.ಪುನೀತ್, ಮುರುಗೇಶ್, ಕೆ.ಆರ್.ಮಲ್ಲಿಕಾರ್ಜುನ ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ. 90ಕ್ಕಿಂತ ಮೇಲ್ಪಟ್ಟು ಅಂಕ ಪಡೆದ ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯ 56 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸ್ಕೌಟ್ಸ್ ಆ್ಯಂಡ್ ಗೈಡ್ಸ್ ರಾಜ್ಯ ಪ್ರಶಸ್ತಿ ಪುರಸ್ಕೃತ ಜಿ.ವಿ.ಅನಿಕೇತ್, ಶಿವಪ್ರಕಾಶ್, ರಾಷ್ಟ್ರೀಯ ಹ್ಯಾಕಥಾನ್ ವಿಜೇತ ಜಿ.ಜೆ.ಸುಹಾಸ್, ಕ್ರೀಡಾಪಟು ಎಲ್.ಕೆ.ಅಭಿತಾ ಅವರಿಗೆ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net