

ಭೋಪಾಲ:ಮಧ್ಯಪ್ರದೇಶದ ಮೊರೇನಾ ಜಿಲ್ಲೆ ಒಂದು ಕಾಲದಲ್ಲಿ ಡಕಾಯಿತರ ಆಡುಂಬೊಲವಾಗಿತ್ತು. ಈಗ ಮರಳು ಮಾಫಿಯಾಕ್ಕೆ ಕುಖ್ಯಾತವಾಗಿದ್ದು, ಒತ್ತೆ ಹಣಕ್ಕಾಗಿ ಎಮ್ಮೆ, ಕೋಣಗಳ ಕಳ್ಳತನ ಹೆಚ್ಚಾಗಿದೆ!
ಈ ಕಳ್ಳತನಕ್ಕೊಂದು ವಿಶೇಷತೆ ಇದೆ. ಕಳ್ಳರು ಮೊದಲು ಎಮ್ಮೆ, ಕೋಣಗಳಿರುವ ಮನೆಗಳನ್ನು ಗುರುತಿಸುತ್ತಾರೆ. ನಂತರ ಒಬ್ಬೊಬ್ಬರಾಗಿ ಅಂತಹ ಮನೆಯ ಬಳಿ ಸೇರುತ್ತಾರೆ. ಸದ್ದಿಲ್ಲದಂತೆ ಎಮ್ಮೆ, ಕೋಣವನ್ನು ಕೊಟ್ಟಿಗೆಯಿಂದ ಬಿಡಿಸಿಕೊಂಡು ಎಸ್ಕೇಪ್ ಆಗುತ್ತಾರೆ. ಹೀಗೆ ಎಸ್ಕೇಪ್ ಆಗುವ ಸಂದರ್ಭದಲ್ಲಿ ಅವರು ನೆಲಕ್ಕೆ ಪ್ಲಾಸ್ಟಿಕ್ ಹಾಸಿರುತ್ತಾರೆ. ಎಮ್ಮೆ, ಕೋಣಗಳ ಕಾಲಿನ ಗೊರಸಿನ ಅಚ್ಚು ನೆಲದ ಮೇಲೆ ಬೀಳದಿರಲಿ ಎಂಬ ಮುನ್ನೆಚ್ಚರಿಕೆ ಅದು.ನೆಲದ ಮೇಲೆ ಅವುಗಳ ಹೆಜ್ಜೆ ಗುರುತು ಮೂಡಿದರೆ ಪೊಲೀಸ್ ಜಾಲಕ್ಕೆ ಸುಲಭ ತುತ್ತಾಗುವುದು ಗ್ಯಾರೆಂಟಿ ಎಂಬ ಆತಂಕವೂ ಅವರಲ್ಲಿರುವುದುಕ್ಕೆ ಇದು ಸಾಕ್ಷಿ.
ಇಷ್ಟಾದ ಬಳಿಕ ಕಳ್ಳರು ಮಧ್ಯವರ್ತಿಯೊಬ್ಬರನ್ನು ಸಂಪರ್ಕಿಸುತ್ತಾರೆ. ಆ ಪ್ರಾಣಿಯ ಮೌಲ್ಯದ ಶೇಕಡ 25ರಿಂದ 30 ಪಾಲು ಹಣವನ್ನು ಒತ್ತೆಹಣವಾಗಿ ನೀಡಬೇಕು ಎಂದು ಅವುಗಳ ಮಾಲೀಕರಿಗೆ ಈ ಮಧ್ಯವರ್ತಿ ಮೂಲಕ ಸಂದೇಶ ರವಾನಿಸುತ್ತಾರೆ.ಈ ರೀತಿಯ ಒತ್ತೆಹಣಕ್ಕೆ ಸ್ಥಳೀಯವಾಘಿ ಪನ್ಹೈ ಎಂದು ಹೇಳುತ್ತಾರೆ.
ಜಿಲ್ಲಾ ಎಸ್ಪಿ ಅಸಿತ್ ಯಾದವ್ ಹೇಳುವ ಪ್ರಕಾರ, ಈ ವರ್ಷ 23 ಇಂತಹ ಪ್ರಕರಣಗಳು ನಡೆದಿದ್ದು, ಪ್ರಕರಣಗಳು ದಾಖಲಾಗಿವೆ. ಆದರೆ, ಕಳ್ಳರನ್ನು ಹಿಡಿಯುವುದು ಮಾತ್ರ ಸಾಧ್ಯವಾಗಿಲ್ಲ. ಇದಕ್ಕೆ ಮಧ್ಯವರ್ತಿಗಳ ವ್ಯವಹಾರವೇ ಕಾರಣ. ಅವರು ಸದ್ದಿಲ್ಲದೇ ಎಮ್ಮೆ, ಕೋಣಗಳನ್ನು ಕಳೆದುಕೊಂಡ ಮಾಲೀಕರೊಂದಿಗೆ ವ್ಯವಹಾರ ಕುದುರಿಸಿ ತಮ್ಮ ಕೆಲಸ ಮುಗಿಸಿಬಿಡುತ್ತಿದ್ದಾರೆ. ಚಂಬಲ್ ಪ್ರಾಂತ್ಯದ 200-300 ಕಿ.ಮೀ. ಉದ್ದದ ಪ್ರದೇಶದಲ್ಲಿ ಇದು ಸರ್ವೇ ಸಾಮಾನ್ಯ.(ಏಜೆನ್ಸೀಸ್)