

ಬೆಂಗಳೂರು: ಇಂದಿನಿಂದ ಆರಂಭಗೊಳ್ಳಲಿರುವ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಅವರ ಭಾಷಣದಲ್ಲಿ ರಾಜ್ಯದಲ್ಲಿ ಸಿಎಎ ಜಾರಿ ಕುರಿತು ಮಾತನಾಡಲಿದ್ದಾರೆ ಎಂಬ ಸುಳಿವು ದೊರೆತಿದೆ.
ರಾಜ್ಯದಲ್ಲಿ ಸಿಎಎ ಜಾರಿ ಬಗ್ಗೆ ರಾಜ್ಯಪಾಲರು ಭಾಷಣದಲ್ಲಿ ಪ್ರಸ್ತಾಪಿಸಿದರೆ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ. ರಾಜ್ಯಪಾಲರು ಸಿಎಎ ಕುರಿತು ಪ್ರಸ್ತಾಪಿಸಿದರೆ ವಿರೋಧ ವ್ಯಕ್ತಪಡಿಸಲು ಕಾಂಗ್ರೆಸ್ ನಿರ್ಧಾರ ಮಾಡಿದೆ.
ಸಿಎಎ ಜಾರಿ ವಿಚಾರದಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ವಾಕ್ಸಮರಕ್ಕೆ ನಾಂದಿ ಹಾಡುವ ಸಾಧ್ಯತೆ ಇದೆ. ಸಿಎಎ ಜಾರಿ ಕುರಿತು ರಾಜ್ಯ ಸರ್ಕಾರದ ಸ್ಪಷ್ಟ ನಿಲುವು ಘೋಷಣೆಯಿಂದ ಅಧಿವೇಶನದ ಮೇಲೆ ಕರಿನೆರಳು ಬೀಳಲಿದ್ದು ಸದನದಲ್ಲಿ ಗಲಾಟೆಯಾಗಲಿದೆ. ಕಲಾಪಕ್ಕೆ ವಿರೋಧ ಪಕ್ಷಗಳಿಂದ ಅಡ್ಡಿಯಾದರೆ ಜಂಟಿ ಅಧಿವೇಶನದ ಅವಧಿ ಮೊಟಕಾಗುವ ಸಾಧ್ಯತೆ ಇದೆ.
ಇಂದಿನಿಂದ ವಿಧಾನಮಂಡಲ ಕಲಾಪ ಆರಂಭವಾಗುವ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನಡೆಸಲಿದ್ದಾರೆ. ಸದನದಲ್ಲಿ ಜೆಡಿಎಸ್ ಸದಸ್ಯರ ಕಾರ್ಯತಂತ್ರದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದ್ದು, ಸರ್ಕಾರವನ್ನು ಹೇಗೆ ಕಟ್ಟಿಹಾಕಬೇಕೆಂಬ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು. ಅಲ್ಲದೆ, ವಿಪಕ್ಷ ಶಾಸಕರ ಕ್ಷೇತ್ರಗಳಿಗೆ ಅನುದಾನ ತಡೆಹಿಡಿದಿರುವುದನ್ನು ಪ್ರಮುಖವಾಗಿ ಪ್ರಸ್ತಾಪಿಸುವ ಬಗ್ಗೆ ಸಭೆಯಲ್ಲಿ ಕುಮಾರಸ್ವಾಮಿ ತೀರ್ಮಾನ ಮಾಡಲಿದ್ದಾರೆ.
ಮಂಗಳೂರು ಗೋಲಿಬಾರ್, ವಿಡಿಯೋ ಬಿಡುಗಡೆ ಬಗ್ಗೆಯೂ ಸದನದಲ್ಲಿ ಪ್ರಮುಖವಾಗಿ ಪ್ರಸ್ತಾಪ ಮಾಡುವ ವಿಷಯಗಳಾಗಿವೆ. (ದಿಗ್ವಿಜಯ ನ್ಯೂಸ್)