ಹತ್ತೇ ನಿಮಿಷಕ್ಕೆ ಮುಕ್ತಾಯಗೊಂಡ ಬಜೆಟ್ ಸಭೆ

25 skpp 1
ಪುರಸಭೆಯ 2025-26ರ ಆಯವ್ಯಯ ಸಭೆ ಪುರಸಭೆ ಅಧ್ಯಕ್ಷೆ ಜ್ಯೋತಿ ರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
Published on

ಸಕಲೇಶಪುರ: ಇಲ್ಲಿನ ಪುರಸಭೆಯ 2025-26 ಆಯವ್ಯಯ ಸಭೆ ಕೇವಲ 10 ನಿಮಿಷಕ್ಕೆ ಮುಕ್ತಾಯಗೊಂಡಿತು.

ಮಂಗಳವಾರ ಬೆಳಗ್ಗೆ 11.30ಕ್ಕೆ ಆರಂಭವಾಗಬೇಕಿದ್ದ ಸಭೆ ಸದಸ್ಯರ ಒತ್ತಾಯಕ್ಕೆ ಮಣಿದು 12 ಗಂಟೆಗೆ ಪ್ರಾರಂಬಿಸಲಾಯಿತು. ಸಭೆಯ ಆರಂಭದಲ್ಲಿ ಹೊಸದಾಗಿ ಸರ್ಕಾರದಿಂದ ನಾಮನಿರ್ದೇಶಕರಾಗಿ ಆಯ್ಕೆಯಾಗಿರುವ ಐವರು ಸದಸ್ಯರನ್ನು ಪರಿಚಯಿಸಿ, ಸ್ವಾಗತಿಸಲಾದ ನಂತರ ಪುರಸಭೆ ಅಧ್ಯಕ್ಷೆ ಜ್ಯೋತಿ ರಾಜ್‌ಕುಮಾರ್ ನಾಲ್ಕು ಪುಟದ ಆಯವ್ಯಯ ಪ್ರತಿಯನ್ನು ಓದಿದರು. ಇದಕ್ಕೆ ಪುರಸಭೆಯ ಕೆಲವು ಹಿರಿಯ ಸದಸ್ಯರು ಮೇಜುಕುಟ್ಟಿ ಸ್ವಾಗತಿಸಿದರು. ಪ್ರತಿ ಓದಿ ಮುಕ್ತಾಯಗೊಂಡ ತಕ್ಷಣವೇ ಅನುಮೋದನೆಗಾಗಿ ಸದಸ್ಯರ ಸಹಿ ಪಡೆದು ಸಭೆ ಮುಕ್ತಾಯಗೊಳಿಸಲಾಯಿತು.

ಆಸ್ತಿ ತೆರಿಗೆ, ವಿಶೇಷ ಅನುದಾನ, ಮಳಿಗೆ ಬಾಡಿಗೆ, ಕಟ್ಟಡ ಪರವಾನಿಗೆ ಸೇರಿದಂತೆ ವಿವಿಧ ರೂಪದಿಂದ 38.59 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದ್ದರೆ, ಬಡವರಿಗೆ ನಿವೇಶನ, ಕಟ್ಟಡ ನಿರ್ಮಾಣ, ಉದ್ಯಾನ ಅಭಿವೃದ್ಧಿ, ಮಾರ್ಗಸೂಚಿ ಫಲಕ ಅಳವಡಿಕೆ, ಒಳಚರಂಡಿ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಾಗಿ 37.27 ಕೋಟಿ ರೂ. ಖರ್ಚು ಮಾಡುವ ಗುರಿ ಹೊಂದಿದ್ದು ಒಟ್ಟಾರೆ 90 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷೆ ಝರೀನಾ, ಮುಖ್ಯಾಧಿಕಾರಿ ಮಹೇಶ್ವರಪ್ಪ, ಸದಸ್ಯರಾದ ಯಾದಗಾರ್ ಇಬ್ರಾಹಿಂ, ಮುಖೇಶ ಶೆಟ್ಟಿ, ಅಣ್ಣಪ್ಪ, ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net