

ತಿ.ನರಸೀಪುರ: ಸಮಾಜದಲ್ಲಿ ಸಹಬಾಳ್ವೆ, ಭ್ರಾತೃತ್ವ ಹಾಗೂ ಸಮಾನತೆಯ ಸಂದೇಶವನ್ನು ಸಾರುವ ಉದ್ದೇಶದಿಂದ ಜುಲೈನಲ್ಲಿ ತಾಲೂಕು ಕೇಂದ್ರವಾದ ಪಟ್ಟಣದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲು ಇತ್ತೀಚೆಗೆ ಕರೆಯಲಾಗಿದ್ದ ತಾಲೂಕಿನ ರೈತ ಮತ್ತು ಪ್ರಗತಿಪರ ಸಂಘಟನೆಗಳು ಹಾಗೂ ವಿವಿಧ ಸಮುದಾಯ, ಸಂಘಟನೆಗಳ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ದಲಿತ ಸಂಘರ್ಷ ಸಮಿತಿ ಬಣ ರಹಿತ ತಾಲೂಕು ಶಾಖೆಯ ನೇತೃತ್ವದಲ್ಲಿ ನಡೆದಂತಹ ತಾಲೂಕಿನ ರೈತ ಮತ್ತು ಪ್ರಗತಿಪರ ಸಂಘಟನೆಗಳು ಹಾಗೂ ವಿವಿಧ ಸಮುದಾಯದ ಮುಖಂಡರ ಸಭೆಯಲ್ಲಿ ಮುಂದಿನ ಜುಲೈ ತಿಂಗಳಿನ ಮೊದಲ ಅಥವಾ ಎರಡನೇ ವಾರದಲ್ಲಿ ಒಂದೇ ವೇದಿಕೆಯಲ್ಲಿ ಆಯೋಜನೆಗೊಳ್ಳುವ ಮಹನೀಯರ ಜಯಂತಿಯಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಅವರ ಚಿಂತನೆಯನ್ನು ಬೋಧನೆ ಮಾಡಬೇಕು. ಕಾರ್ಯಕ್ರಮಕ್ಕೆ ಬೌದ್ಧ ಬಂತೇಜಿ ಸೇರಿದಂತೆ ಸಾನ್ನಿಧ್ಯ ವಹಿಸಲು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಜಿ ಅವರನ್ನು ಆಹ್ವಾನಿಸಲು ತೀರ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಪ್ರಿಯಾಂಕ್ ಖರ್ಗೆ, ಸಂಸದ ಸುನೀಲ್ ಬೋಸ್, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕ ಎಂ.ಅಶ್ವಿನ್‌ಕುಮಾರ್, ಬಿಜೆಪಿ ಮುಖಂಡ ಡಾ.ಎಂ.ರೇವಣ್ಣ ಸೇರಿದಂತೆ ಇತರರನ್ನು ಆಹ್ವಾನಿಸಬೇಕು. ಜತೆಗೆ ಸಂಘಟನೆಗಳ ಅಧ್ಯಕ್ಷರ ಉಪಸ್ಥಿತಿಯೊಂದಿಗೆ ಬುದ್ಧ-ಬಸವ-ಅಂಬೇಡ್ಕರ್ ವಿಚಾರದಲ್ಲಿ ಚಿಂತನೆ ಮಾಡುವ ಒಬ್ಬ ಮುಖ್ಯಭಾಷಣಕಾರರನ್ನು ಆಹ್ವಾನಿಸಬೇಕು. ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಬಾಗಿತ್ವದಲ್ಲಿ ವಿವಿಧ ಕಲಾತಂಡಗಳಿಂದ ’ಬುದ್ಧ- ಬಸವ -ಅಂಬೇಡ್ಕರ್ ಭಾವಚಿತ್ರಗಳ ಆಕರ್ಷಕ ಮೆರವಣಿಗೆ ನಡೆಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸಿ.ಉಮಾಮಹದೇವ, ಜಿಲ್ಲಾ ಸಂಘಟನಾ ಸಂಚಾಲಕ ಆಲತ್ತೂರು ಶಿವರಾಜು, ವಕೀಲರ ಸಂಘದ ಅಧ್ಯಕ್ಷ ತೊಟ್ಟವಾಡಿ ಮಹೆದೇವಸ್ವಾಮಿ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕಿರಗಸೂರು ಶಂಕರ್, ರೈತ ಸಂಘದ ಅಧ್ಯಕ್ಷ ಕರೋಹಟ್ಟಿ ಕುಮಾರಸ್ವಾಮಿ, ವೀರಶೈವ ಮಹಾಸಭಾದ ಅಧ್ಯಕ್ಷ ಸಿ.ಎಂ.ಪ್ರಕಾಶ್, ಗ್ರಾ.ಪಂ ಮಾಜಿ ಅಧ್ಯಕ್ಷ ಶಿವಪ್ರಕಾಶ್, ತಾಲೂಕು ನಾಯಕರ ಸಂಘದ ಅಧ್ಯಕ್ಷ ಬನ್ನೂರು ಚಿಕ್ಕಯ್ಯ, ಸಮಾಜ ಸೇವಕ ಅಯ್ಯಪ್ಪ ಸಿದ್ದಲಿಂಗಮೂರ್ತಿ, ರಾಜ್ಯ ದಲಿತ ಪ್ಯಾಂಥರ್ ಪ್ರಧಾನ ಕಾರ್ಯದರ್ಶಿ ಗಾಂಧಿನಗರ ಎಸ್.ಸುರೇಶ, ಮಡಿವಾಳರ ಸಂಘದ ಅಧ್ಯಕ್ಷ ಕುರುಬೂರು ಮಹದೇವಸ್ವಾಮಿ, ಅನಾಥ ಶವಗಳ ಮುಕ್ತಿಧಾತ ಮಾದೇಶ, ಉಪನ್ಯಾಸಕ ಮೂಗೂರು ಕುಮಾರಸ್ವಾಮಿ, ಸಿಐಟಿಯು ಕಾರ್ಮಿಕರ ಸಂಘಟನೆ ಅಧ್ಯಕ್ಷ ನವೀನ್, ಸ್ಟುಡೆಂಟ್ ವರ್ಚುಯಲ್ ಬ್ರಿಗೇಡ್‌ನ ಅಧ್ಯಕ್ಷ ಆಲಗೂಡು ಲಿಂಗರಾಜು, ದಲಿತ ಕಲಾವಿದರ ಸಂಘದ ಉಪಾಧ್ಯಕ್ಷ ತುಂಬಲ ಶಿವಣ್ಣ, ತೊರೆಕಾಡನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಮಹೇಶ್, ಮರಡೀಪುರ ಮಲ್ಲಿಕಾರ್ಜುನ, ಗುರುಮಲ್ಲಪ್ಪ ಬೆನಕನಹಳ್ಳಿ, ಮಡಿವಾಳರ ಮುಖಂಡ ಆಲಗೂಡು ಬಸವರಾಜು, ಸುತ್ತೂರು ಮಹೇಶ್, ಕಾರ್ಮಿಕ ಮುಖಂಡ ನಿಂಗರಾಜು ಭಾಗವಹಿಸಿದ್ದರು.