

ನವದೆಹಲಿ: ನಟೋರಿಯಸ್ ರೌಡಿ ವಿಕಾಸ್ ದುಬೆ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳಿದ್ದರೂ ಜಾಮೀನಿನ ಮೇಲೆ ಆತ ಪದೇ ಪದೇ ಹೊರಬರುತ್ತಿರುವುದಕ್ಕೆ ಸುಪ್ರೀಂಕೋರ್ಟ್ ತೀವ್ರ ಅಚ್ಚರಿ ವ್ಯಕ್ತಪಡಿಸಿದೆ.
ದುಬೆ ಮತ್ತು ಆತನ ಸಹಚರರ ಎನ್‌ಕೌಂಟರ್ ಕುರಿತ ತನಿಖೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಕೋರ್ಟ್ ನಡೆಸುತ್ತಿದೆ. ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ನೇತೃತ್ವದ ನ್ಯಾಯಪೀಠ ಇದರ ವಿಚಾರಣೆ ನಡೆಸುತ್ತಿದೆ. ವಿಚಾರಣೆ ವೇಳೆ, ದುಬೆ ಈ ಹಿಂದೆ ಕೋರ್ಟ್‌ಗಳಿಂದ ಜಾಮೀನು ಪಡೆದುಕೊಂಡಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿ, ನಾವು ಇದರಿಂದ ದಿಗಿಲುಗೊಂಡಿದ್ದೇವೆ, ಇದು ವ್ಯವಸ್ಥೆಯ ವೈಫಲ್ಯವನ್ನು ತೋರಿಸುತ್ತದೆ ಎಂದಿದೆ.
ಎಂಟು ಮಂದಿ ಪೊಲೀಸರನ್ನು ಹತ್ಯೆ ಮಾಡುವಂಥ ವ್ಯಕ್ತಿ ಜೈಲಿನಿಂದ ಹೊರಕ್ಕೆ ಇದ್ದುದು ನಿಜವಾಗಿಯೂ ವಿಷಾದಕರ ಸಂಗತಿ, ಜೈಲಿನ ಒಳಗಡೆ ಇರಬೇಕಿರುವ ವ್ಯಕ್ತಿ ಈ ರೀತಿ ಜಾಮೀನು ಪಡೆದುಕೊಂಡಿರುವುದು ನಮ್ಮ ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ನ್ಯಾಯಮೂರ್ತಿಗಳು ಹೇಳಿದರು.
ನೀವು ಕಾನೂನನ್ನು ಪಾಲನೆ ಮಾಡಬೇಕು, ಇದು ನಿಮ್ಮ ಕರ್ತವ್ಯ ಎಂದು ಉತ್ತರ ಪ್ರದೇಶ ಸರ್ಕಾರವನ್ನು ಕೋರ್ಟ್ ಹೇಳಿದೆ.
ಇದೇ ವೇಳೆ, ವಿಕಾಸ್ ದುಬೆಯ ಎನ್‌ಕೌಂಟರ್ ಕುರಿತು ತನಿಖೆ ನಡೆಯುತ್ತಿರುವ ಸಮಿತಿಯಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಯನ್ನು ಸೇರ್ಪಡೆಗೊಳಿಸುವಂತೆ ಕೋರ್ಟ್ ಹೇಳಿದ್ದು, ಇದಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಮೂರು ದಶಕಗಳಿಂದ ಕ್ರಿಮಿನಲ್ ಪ್ರಕರಣದಲ್ಲಿ ತೊಡಗಿಸಿಕೊಂಡಿರುವ ವಿಕಾಸ್ ದುಬೆ 60ಕ್ಕೂ ಅಧಿಕ ಪ್ರಕರಣಗಳು ಇವೆ. ಈಗ ಕನಿಷ್ಠ 15 ಮಂದಿಯನ್ನು ಹತ್ಯೆ ಮಾಡಿದ್ದಾನೆ. ಇಷ್ಟೊಂದು ಪ್ರಕರಣಗಳು ಇದ್ದರೂ ಜಾಮೀನು ಪಡೆದುಕೊಳ್ಳುವಲ್ಲಿ ಈತ ಯಶಸ್ವಿಯಾಗುತ್ತ ಬಂದಿದ್ದು ಹೇಗೆ ಎಂದು ಕೋರ್ಟ್ ಅಚ್ಚರಿ ವ್ಯಕ್ತಪಡಿಸಿದೆ.