ಪೂರ್ಣಾವಧಿಗೆ ಬಿಎಸ್​ವೈ ಸಿಎಂ; ರಾಜ್ಯ ಸರ್ಕಾರಕ್ಕೆ ಅಮಿತ್ ಷಾ ಅಭಯ

BSY Sha
Published on

ಬೆಂಗಳೂರು: ಸಂಪುಟ ವಿಸ್ತರಣೆ ಮೂಲಕ ತಮ್ಮ ನಾಯಕತ್ವ ಅಬಾಧಿತ ಎಂಬ ಸಂದೇಶವನ್ನು ಸಾರಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರಕ್ಕೀಗ ಕೇಂದ್ರ ಗೃಹ ಸಚಿವ ಅಮಿತ್ ಷಾ ಅಭಯ ಸಿಕ್ಕಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ತನ್ನ ಅವಧಿ ಪೂರ್ಣಗೊಳಿಸಲಿದ್ದು, ಮುಂದಿನ ಐದು ವರ್ಷ ಅವಧಿಗೂ ಪೂರ್ಣ ಬಹುಮತದ ಸರ್ಕಾರ ರಚಿಸಲಿದೆ ಎಂದು ಅಮಿತ್ ಷಾ ಗಟ್ಟಿ ದನಿ ಮೊಳಗಿಸಿದ್ದಾರೆ. ಆ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪರವಾಗಿ ನಾವಿದ್ದೇವೆ ಎಂಬ ಸಂದೇಶವನ್ನು ಅಧಿಕಾರಿ ವರ್ಗ, ಪಕ್ಷದ ನಾಯಕರು ಹಾಗೂ ಪ್ರತಿಪಕ್ಷಗಳಿಗೂ ಮುಟ್ಟಿಸಿದ್ದಾರೆ. ವಿಧಾನಸೌಧದಲ್ಲಿ ಶನಿವಾರ ಗೃಹ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮಿತ್ರರಲ್ಲಿ ಭಯ ಇದೆ. ಏನೋ ಆಗುತ್ತಿದೆ ಎಂದು ಪ್ರತಿ ದಿನ ಹೇಳುತ್ತಿರುತ್ತಾರೆಂದು ವ್ಯಂಗ್ಯವಾಡಿದರು.

ಅಭಿವೃದ್ಧಿ ಕಾರ್ಯ: ಬಿಜೆಪಿಯಿಂದ ಯಾರಿಗೂ ತೊಂದರೆ ಆಗಲ್ಲ. ಜನರಿಗಾಗಿ ಕೆಲಸ ಮಾಡುವ ಪಕ್ಷ ನಮ್ಮದು. ಯಡಿಯೂರಪ್ಪನವರ ಸರ್ಕಾರದಿಂದ ಬಹಳಷ್ಟು ಅಭಿವೃದ್ಧಿ ಕಾರ್ಯಕ್ರಮ ಆಗಿದೆ. ಮೋದಿಯವರೂ ಕೂಡ ರಾಜ್ಯಕ್ಕೆ ಹಲವಾರು ಕಾರ್ಯಕ್ರಮ ನೀಡಿದ್ದಾರೆ ಎಂದರು.

ಪೊಲೀಸರಿಗೆ ಅಭಿನಂದನೆ: ಕರ್ನಾಟಕಕ್ಕೂ ಕರೊನಾ ವ್ಯಾಕ್ಸಿನ್ ತಲುಪಿದೆ. ಯಡಿಯೂರಪ್ಪ ನೇತೃತ್ವದಲ್ಲಿ ಕರ್ನಾಟಕದಲ್ಲೂ ಕರೊನಾ ವಿರುದ್ಧದ ಹೋರಾಟ ಉತ್ತಮ ರೀತಿಯಲ್ಲಿ ನಡೆಯುತ್ತಿದೆ ಎಂದ ಷಾ, ಕರ್ನಾಟಕ ಪೊಲೀಸರಿಗೆ ವಿಶೇಷ ಅಭಿನಂದನೆ ಸಲ್ಲಿಸಿದರು. ಲಾಕ್​ಡೌನ್ ಸಂದರ್ಭ ಇರಬಹುದು, ಅಭಿಯಾನದ ವೇಳೆ ಬದ್ಧತೆಯಿಂದ ಕೆಲಸ ಮಾಡಿದ್ದಾರೆ. ಅದರಲ್ಲೂ ಬೆಂಗಳೂರು ಪೊಲೀಸರು ಅಭಿನಂದನಾರ್ಹರು ಎಂದು ಹೇಳಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸದಾನಂದ ಗೌಡ, ಮುಖ್ಯಕಾರ್ಯದರ್ಶಿ ರವಿಕುಮಾರ್, ಅಪರ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್, ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ಪೊಲೀಸ್ ಹಿರಿಯ ಅಧಿಕಾರಿಗಳು, ಪೊಲೀಸ್ ಕುಟುಂಬಗಳು ಹಾಜರಿದ್ದರು.

ಲಸಿಕೆ ಟೀಕೆಗೆ ಹರಿತ ಉತ್ತರ

ಕರೊನಾ ವಿರುದ್ಧದ ಸಮರದಲ್ಲಿ ಲಸಿಕೆ ಮೂಲಕ ಮಹತ್ವಪೂರ್ಣ ಯಶಸ್ಸು ಸಿಕ್ಕಿದೆ. ಎರಡೂ ಲಸಿಕೆ ವಿತರಣೆ ದೇಶಾದ್ಯಂತ ಆರಂಭವಾಗಿದೆ. ಆದರೆ, ಲಸಿಕೆ ಕುರಿತು ಟೀಕೆಗಳು ಆರಂಭವಾಗಿದೆ ಎಂದು ಗೃಹ ಸಚಿವ ಅಮಿತ್ ಷಾ ಅಸಮಾಧಾನ ವ್ಯಕ್ತಪಡಿಸಿದರು. ಸಂಕ್ರಾಂತಿಯಿಂದ ಸೂರ್ಯ ನಾರಾಯಣನು ತನ್ನ ಪಥಬದಲಿಸಿದಂತೆ ಕರೊನಾ ವಿರುದ್ಧದ ನಮ್ಮ ಹೋರಾಟ ಕೂಡ ಸಫಲವಾಗುತ್ತದೆ ಎಂದ ಅವರು, ನಮ್ಮ ದೇಶದ ವಿಜ್ಞಾನಿಗಳು ಲಸಿಕೆ ಕಂಡುಹಿಡಿದಿದ್ದಾರೆ. ದೇಶದಲ್ಲಿ ಇನ್ನು ಮೂರು ನಾಲ್ಕು ಲಸಿಕೆ ಸಿದ್ಧವಾಗಿದ್ದು, ಅದರ ಬಿಡುಗಡೆ ಪೈಪ್​ಲೈನ್​ನಲ್ಲಿದೆ ಎಂದರು.

ಕರೊನಾ ಕಾಣಿಸಿಕೊಂಡ ಆರಂಭದಲ್ಲಿ ಕೇವಲ ಒಂದು ಪ್ರಯೋಗಾಲಯ ಇತ್ತು. ಇಂದು ಎರಡು ಸಾವಿರಕ್ಕಿಂತ ಹೆಚ್ಚು ಪ್ರಯೋಗಾಲಯ ಕಾರ್ಯನಿರ್ವಹಿಸುತ್ತಿವೆ. ಪಿಪಿಇ ಕಿಟ್ ನಮ್ಮ ದೇಶದಲ್ಲಿ ಸಿದ್ಧವಾಗುತ್ತಿರಲಿಲ್ಲ, ಇಂದು ಭಾರತ ರಫ್ತು ಮಾಡುತ್ತಿದೆ. ವೆಂಟಿಲೇಟರ್ ಕೂಡ ರಫ್ತು ಮಾಡಲಾಗುತ್ತಿದೆ. ಇದೆಲ್ಲ ಆಗಿದ್ದು ಈ ಕಡಿಮೆ ಅವಧಿಯಲ್ಲಿ ಎಂಬುದು ಗಮನಾರ್ಹ ಸಂಗತಿ. ಪ್ರತಿ ಲಕ್ಷ ಸೋಂಕಿತರ ಪೈಕಿ ಮೃತಪಡುತ್ತಿರುವವರ ಪ್ರಮಾಣ ಭಾರತದಲ್ಲೇ ಕಡಿಮೆ ಇದೆ. ಸೋಂಕಿನಿಂದ ಹೊರಬರುತ್ತಿರುವವ ಸಂಖ್ಯೆಯೂ ಶೇ.95ಕ್ಕಿಂತ ಹೆಚ್ಚಿದೆ. ಈ ಪಟ್ಟಿಯಲ್ಲೂ ಕೆಲವೇ ದೇಶಗಳಿದ್ದು, ಭಾರತ ಕೂಡ ಒಂದಾಗಿದೆ ಎಂದರು.

ಕರೊನಾ ವಿರುದ್ಧ ಸರ್ಕಾರವೇ ಸಮರ ಸಾರಿತು. ಮೋದಿಯವರ ನೀತಿಯ ಕಾರಣದಿಂದ ಇದು ಸಾಧ್ಯವಾಯಿತು. ಎಲ್ಲ ರಾಜ್ಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋರಾಟ ನಡೆಸಲಾಯಿತು. ಇದರ ಪರಿಣಾಮ ಉತ್ತಮ ಪರಿಸ್ಥಿತಿಯಲ್ಲಿದ್ದೇವೆ. ವಿಶ್ವದಲ್ಲಿ ಎಲ್ಲೂ ನಡೆಯದ್ದು ಇಲ್ಲಿ ಆಯಿತು. ಒಬ್ಬನಾಯಕನ ಕರೆಯಂತೆ ಜನತಾ ಕರ್ಫ್ಯೂ ನಡೆಯಿತು, ಲಾಕ್​ಡೌನ್ ಕರೆಗೂ ಸ್ಪಂದನೆ ಸಿಕ್ಕಿತು. ಈಗ ಹೋರಾಟದ ಪ್ರಧಾನ ಹಂತಕ್ಕೆ ತಲುಪಿದ್ದೇವೆ ಎಂದರು.

ಅಭಿವೃದ್ಧಿ ಕಾರ್ಯಕ್ಕೆ ರಾಜ್ಯ, ಕೇಂದ್ರ ಬದ್ಧ: ಕೇಂದ್ರ ಮತ್ತು ರಾಜ್ಯ ಸರ್ಕಾರ ಒಟ್ಟಿಗೆ ಸೇರಿ ಕರ್ನಾಟಕದ ಅಭಿವೃದ್ಧಿಗೆ ಬದ್ಧವಾಗಿವೆ . ಮೂಲ ಸೌಕರ್ಯ, ಹಣಕಾಸು ನೆರವು, ಪೊಲೀಸ್ ಆಧುನೀಕರಣ, ಶಿಕ್ಷಣ ಕ್ಷೇತ್ರಕ್ಕೆ ಸಂಸ್ಥೆ ಸ್ಥಾಪನೆ, ಕೃಷಿ ಕ್ಷೇತ್ರದ ಬದಲಾವಣೆಗೆ ಮೂಲ ಸೌಕರ್ಯ, ರೈತರಿಗೆ ನೆರವು, ಹೀಗೆ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ ನೆರವಾಗಲಿದೆ ಎಂದು ಅಮಿತ್ ಷಾ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net