

ಬೆಂಗಳೂರು: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೋಮವಾರ ಬೆಳಗ್ಗೆ ಸಿಐಡಿ ವಿಚಾರಣೆ ಎದುರಿಸಿದರು.
ಅರಮನೆ ರಸ್ತೆಯಲ್ಲಿರುವ ಕಚೇರಿಗೆ ಭೇಟಿ ನೀಡಿದ ಅವರನ್ನು ತನಿಖಾಧಿಕಾರಿ ಡಿವೈಎಸ್‌ಪಿ ಪುನೀತ್ ವಿಚಾರಣೆ ನಡೆಸಿದರು. ಸತತ ಮೂರು ತಾಸು ವಿಚಾರಣೆ ನಡೆಸಿ ಮತ್ತೆ ಕರೆದಾಗ ಬರಬೇಕೆಂದು ಹೇಳಿ ಕಳುಹಿಸಿದ್ದಾರೆ.
ತನಿಖೆ ನಡೆಸುತ್ತಿದ್ದ ಸಿಐಡಿ ಅಧಿಕಾರಿಗಳು ಹಲವು ಬಾರಿ ನೋಟಿಸ್ ನೀಡಿದರೂ ಆರೋಪಿ ತನಿಖೆಗೆ ಹಾಜರಾಗುತ್ತಿಲ್ಲ ಎಂದು ಸಿಐಡಿ ಕೋರ್ಟ್ ಮೊರೆ ಹೋಗಿದ್ದರು. ಗುರುವಾರ ವಿಶೇಷ ನ್ಯಾಯಾಲಯವು ಬಂಧನ ವಾರಂಟ್ ಜಾರಿ ಮಾಡಿತ್ತು. ವಾರಂಟ್ ಪ್ರಶ್ನಿಸಿ ಬಿಎಸ್‌ವೈ ಶುಕ್ರವಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಬಂಧನ ಮಾಡದಂತೆ ಮತ್ತು ಜೂನ್ 17ಕ್ಕೆ ತಪ್ಪದೆ ತನಿಖೆಗೆ ಹಾಜರಾಗುವಂತೆ ಹೈಕೋರ್ಟ್ ಸೂಚಿಸಿತ್ತು. ಯಡಿಯೂರಪ್ಪ ವಿರುದ್ಧ ಮಾ.14ರಂದು ಸದಾಶಿವನಗರ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಲಾಗಿತ್ತು.
ಮತ್ತೊಂದೆಡೆ ಯಡಿಯೂರಪ್ಪ ಅವರನ್ನು ಬಂಧಿಸುವಂತೆ ನಿರ್ದೇಶನ ಕೋರಿ ಸಂತ್ರಸ್ತೆ ಸಹೋದರ ಜೂ.12ಕ್ಕೆ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿಲ್ಲ. ಮನೆಯ ಸಿಸಿ ಕ್ಯಾಮರಾ ದೃಶ್ಯಾವಳಿ ಜಪ್ತಿ ಮಾಡಿಲ್ಲ. ಕನಿಷ್ಠ ನೋಟಿಸ್ ನೀಡಿ ವಿಚಾರಣೆಗೆ ಕರೆದಿಲ್ಲ. ಈ ಮಧ್ಯೆ ದೂರು ನೀಡಿದ ಸಂತ್ರಸ್ತೆಯ ತಾಯಿ ಮೃತಪಟ್ಟಿದ್ದಾರೆ. ಸಂತ್ರಸ್ತೆಗೆ ನ್ಯಾಯ ಸಿಕ್ಕಿಲ್ಲ ಎಂದು ಮನವಿ ಮಾಡಿದ್ದರು.