

ನವದೆಹಲಿ: ಎಲ್ಲ ಸಚಿವಾಲಯಗಳು, ಸರ್ಕಾರಿ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ (ಪಿಎಸ್ಯುು) ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ದೂರಸಂಪರ್ಕ ಸೇವೆ ಬಳಸುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇಂಟರ್ನೆಟ್, ಸ್ಥಿರ ದೂರವಾಣಿ ಸೇರಿದಂತೆ ಎಲ್ಲ ಟೆಲಿಕಾಂ ಸೇವೆಯನ್ನೂ ಇದೇ ಸಂಸ್ಥೆಗಳಿಂದ ಪಡೆಯುವಂತೆ ಎಲ್ಲ ಸಚಿವಾಲಯಗಳಿಗೆ ಪತ್ರ ರವಾನಿಸಲಾಗಿದೆ.
ಕಳೆದ ಕೆಲ ವರ್ಷಗಳಿಂದ ಭಾರಿ ನಷ್ಟದಲ್ಲಿರುವ ಈ ಸಂಸ್ಥೆಗಳಿಗೆ ನೆರವು ನೀಡುವ ನಿಟ್ಟಿನಲ್ಲಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. 2019-20ರ ಸಾಲಿನಲ್ಲಿ ಬಿಎಸ್ಎನ್ಎಲ್ 15,500 ಕೋಟಿ ರೂ. ನಷ್ಟ ಅನುಭವಿಸಿದೆ. 2008ರಲ್ಲಿ 80 ಕೋಟಿಯಿದ್ದ ಚಂದಾದಾರರ ಸಂಖ್ಯೆ 2020ಕ್ಕೆ 80 ಲಕ್ಷಕ್ಕೆ ಇಳಿದಿದೆ. ಎಂಟಿಎನ್ಎಲ್ 2008ರಲ್ಲಿ 35.4 ಲಕ್ಷ ಚಂದಾದಾರರನ್ನು ಹೊಂದಿದ್ದು ಅದು ಈಗ 30.7 ಲಕ್ಷಕ್ಕೆ ಇಳಿದಿದೆ.