ಬಿಎಸ್‌ಎನ್‌ಎಲ್‌ಗೆ 7 ಸಾವಿರ ರೂ. ದಂಡ

court hammer 1
Published on

ಯಳಂದೂರು: ಪಟ್ಟಣದ ಎಸ್.ನಂದಕುಮಾರಿ ಅವರಿಗೆ ಸೇರಿದ ವಕೀಲರ ಕಚೇರಿಗೆ ಬಿಎಸ್‌ಎನ್‌ಎಲ್ 18.028 ರೂ.ಗಳ ಶುಲ್ಕ ಪಾವತಿ ಮಾಡಬೇಕೆಂಬ ಪ್ರಕರಣ ಸುಳ್ಳು ಎಂದು ತಿರ್ಮಾನಿಸಿ ಕಾಯಂ ಜನತಾ ನ್ಯಾಯಾಲಯ ಬಿಎಸ್‌ಎನ್‌ಎಲ್‌ಗೆ 7 ಸಾವಿರ ರೂ. ದಂಡ ವಿಧಿಸಿದೆ.

ಯಳಂದೂರು ಪಟ್ಟಣದ ನ್ಯಾಯಾಲಯದ ಹತ್ತಿರದ ಕೆ.ಕೆ.ರಸ್ತೆಯಲ್ಲಿರುವ ಎಸ್. ನಂದಕುಮಾರಿ ಅವರು ತಮ್ಮ ಹೆಸರಿನಲ್ಲಿರುವ ವಕೀಲರೊಬ್ಬರ ಕಚೇರಿಗೆ ಬಿಎಸ್‌ಎನ್‌ಎಲ್ ಅಂರ್ತಜಾಲ ಸಂಪರ್ಕಕ್ಕಾಗಿ 2020ರಲ್ಲಿ ಅರ್ಜಿ ಸಲ್ಲಿಸಿದ್ದರು. ಠೇವಣಿ ಮೊತ್ತ 777 ರೂ. ಗಳನ್ನು ಪಾವತಿ ಮಾಡಿದರು. ಆದರೆ ನೆಟ್ ಸೇವೆಯನ್ನು ಪಡೆದಿರಲಿಲ್ಲ. ಜತೆಗೆ ಯಾವುದೇ ಪರಿಕರ, ಸೌಲಭ್ಯಗಳನ್ನೂ ನೀಡಿರಲಿಲ್ಲ. ಆದರೂ ನಂದಕುಮಾರಿ ಅವರಿಗೆ ನೆಟ್ ಸೇವೆ ಬಿಲ್ ಬರಲು ಶುರುವಾಗಿತ್ತು. ಆದರೆ ಇದ್ಯಾವುದೂ ನಂದಕುಮಾರಿ ಅವರ ಗಮನಕ್ಕೆ ಬಂದಿರಲಿಲ್ಲ. ಆದರೆ ಇತ್ತೀಚೆಗೆ ಏಕಾಏಕಿ 18,028 ರೂ. ಶುಲ್ಕ ಪಾವತಿ ಮಾಡುವಂತೆ ಬಿಎಸ್‌ಎನ್‌ಎಲ್ ನಂದಕುಮಾರಿ ಅವರಿಗೆ ನೋಟಿಸ್ ನೀಡಿತ್ತು. ಆದರೆ ಸೇವೆಯನ್ನೇ ಪಡೆಯದೇ ಬಿಲ್ ಪಾವತಿ ಮಾಡುವುದಿಲ್ಲ ಎಂದು ಮಹಿಳೆ ತಿಳಿಸಿದ್ದರು. ಇದಕ್ಕೆ ಒಪ್ಪದ ಬಿಎಸ್‌ಎನ್‌ಎಲ್ ವ್ಯವಸ್ಥಾಪಕರು ಕಾಯಂ ಜನತಾ ನ್ಯಾಯಾಲಯದಲ್ಲಿ ನಂದಕುಮಾರಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಬಳಿಕ ನಡೆದ ಜೂ.21 ರಂದು ವಿಚಾರಣೆಯಲ್ಲಿ ಕೇಬಲ್ ವೈರಿಂಗ್ ಮಾಡಿ ಯಾವುದೇ ಉಪಕರಣ ನೀಡದೆ ಅಂರ್ತಜಾಲ ನೆಟ್ ಸೇವೆ ಒದಗಿಸದೆ ಬಿಲ್ ಪಾವತಿಸುವಂತೆ ನೋಟಿಸ್ ನೀಡಿರುವುದು ಬಹಿರಂಗವಾಗಿದೆ. ಇದರಿಂದ ಬಿಎಸ್‌ಎನ್‌ಎಲ್ ಕಚೇರಿಗೆ ಸಲ್ಲಿಸಿದ ದಾಖಲಾತಿಗಳ ಆಧಾರದ ಮೇಲೆ ಈ ಪ್ರಕರಣ ಸುಳ್ಳೆಂದು ಸಾಬೀತುಪಡಿಸಿ ಪ್ರತಿವಾದಿಗಳನ್ನು ಕೋರ್ಟ್‌ಗೆ ಎಳೆದ ಕಾರಣ ಠೇವಣಿ ಹಣ 777 ರೂ. ಮತ್ತು ದಂಡದ ರೂಪವಾಗಿ 7000 ರೂ. ಪಾವತಿಸುವಂತೆ ನ್ಯಾಯಪೀಠದ ಅಧ್ಯಕ್ಷರಾದ ವಿಮಲಾ ಆರ್. ನಂದಗೋನ್ ಮತ್ತು ಸದಸ್ಯರಾದ ಪಿ. ಸರಸ್ವತಿ ಮತ್ತು ಬಿ.ಕೆ.ಶಾಂತಲಾ ನ್ಯಾಯ ಪೀಠವು ಆದೇಶ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net