

ಬೆಂಗಳೂರು: ಬೈಕ್ ಅಡ್ಡಗಟ್ಟಿದ್ದ ಎಂಬ ಕಾರಣಕ್ಕೆ ಉಂಟಾದ ಹಳೇ ವೈಷಮ್ಯ 13 ವರ್ಷದ ಬಾಲಕನ ಬರ್ಬರ ಹತ್ಯೆಯಲ್ಲಿ ಅಂತ್ಯಗೊಂಡಿರುವುದು ಪೊಲೀಸರು ನಡೆಸಿದ ತನಿಖೆ ವೇಳೆ ಬೆಳಕಿಗೆ ಬಂದಿದೆ.
ನಗರದ ವಿಭೂತಿಪುರ ಕೆರೆಯ ಬಳಿ ಬಾಲಕ ಅರ್ಫಾತ್ನ ಮೃತದೇಹ ಪತ್ತೆಯಾಗಿದ್ದ ಪ್ರಕರಣವನ್ನು ಎಚ್ಎಎಲ್ ಠಾಣೆ ಪೊಲೀಸರು ಭೇದಿಸಿದ್ದು, ಕೃತ್ಯಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತರನ್ನು ಬಂಧಿಸಿದ್ದಾರೆ.
ಕಳೆದ ಅ.5ರಂದು ವಿಭೂತಿಪುರ ಕೆರೆಯ ಸಮೀಪ ಅರ್ಫಾತ್ನ ಮೃತದೇಹ ಭೀಕರ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರಿಗೆ, ಹಳೆಯ ದ್ವೇಷವೇ ಹತ್ಯೆಗೆ ಕಾರಣ ಎಂಬುದಾಗಿ ತಿಳಿದಿದೆ.
ತಿಂಗಳ ಹಿಂದೆ ದ್ವಿಚಕ್ರ ವಾಹನ ಅಡ್ಡಗಟ್ಟಿದ ವಿಚಾರವಾಗಿ ಅರ್ಫಾತ್, ಆತನ ಸಹೋದರ ಹಾಗೂ ಆರೋಪಿಗಳ ಪೈಕಿ ಒಬ್ಬನ ನಡುವೆ ಗಲಾಟೆ ನಡೆದಿತ್ತು. ಇದೇ ವಿಚಾರವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಅಪ್ರಾಪ್ತರು, ಆಗಾಗ ರ್ಅಾತ್ನೊಂದಿಗೆ ಗಲಾಟೆ ಮಾಡುತ್ತಿದ್ದರು. ಅ.4ರಂದು ಸಂಜೆ ಅರ್ಫಾತ್ ವಿಭೂತಿಪುರ ಕೆರೆಯ ಬಳಿ ಬರುತ್ತಾನೆ ಎಂದು ಮೊದಲೇ ಹೊಂಚು ಹಾಕಿದ್ದ ಇಬ್ಬರು ಅಪ್ರಾಪ್ತರು ಆತನ ಮೇಲೆ ಏಕಾಏಕಿ ದಾಳಿ ನಡೆಸಿದ್ದರು. ಇಬ್ಬರು ನಡೆಸಿದ ಹಲ್ಲೆಯಿಂದ ಬಾಲಕ ಕುಸಿದುಬಿದ್ದಾನೆ. ನಂತರ ಆತನ ಮುಖದ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದರು. ಘಟನೆ ನಡೆದ ಮರುದಿನ ಬಾಲಕನ ಮೃತದೇಹ ಪೊಲೀಸರಿಗೆ ಪತ್ತೆಯಾಗಿತ್ತು.
ತನಿಖೆ ಕೈಗೊಂಡ ಎಚ್ಎಲ್ ಠಾಣೆ ಪೊಲೀಸರು ಸದ್ಯ ಇಬ್ಬರು ಅಪ್ರಾಪ್ತರನ್ನು ಪತ್ತೆಹಚ್ಚಿ ಬಂಧಿಸಿ, ವಿಚಾರಣೆ ಕೈಗೊಂಡು ಇಬ್ಬರನ್ನು ಬಾಲ ಮಂದಿರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.