

ಭದ್ರಾವತಿ: ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯನಾಗಿ ಹೋರಾಟ ಮಾಡಿದ ಪ್ರತಿಲವಾಗಿ ಕುವೆಂಪು ವಿಶ್ವವಿದ್ಯಾಲಯ ಶಿವಮೊಗ್ಗ ಜಿಲ್ಲೆಯಲ್ಲೇ ಉಳಿಯಿತು. ಇಲ್ಲದಿದ್ದರೆ ಶಾಮನೂರು ಶಿವಶಂಕರಪ್ಪ ಪ್ರಯತ್ನದಿಂದ ದಾವಣಗೆರೆ ಪಾಲಾಗುತ್ತಿತ್ತು. ನನ್ನ ಹೋರಾಟದ ಮೊದಲ ನೆಲೆ ಬಿಆರ್‌ಪಿ ಎಂದು ಬಿಜೆಪಿ ಲೋಕಸಭಾ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು.
ಬಿಆರ್‌ಪಿ ಸಿಂಗನಮನೆ ಮಹಾಶಕ್ತಿ ಕೇಂದ್ರದಿಂದ ಬಯಲು ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಸಭೆಯಲ್ಲಿ ಮಾತನಾಡಿದರು.
ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳಾಗಬೇಕಿವೆ. ಜನರ ಬೇಡಿಕೆಯಂತೆ ರಂಗನಾಥಸ್ವಾಮಿ ಬೆಟ್ಟದ ದೇವಾಲಯ ಅಭಿವೃದ್ಧಿ ಸೇರಿ ಸಂಪೂರ್ಣ ಮೂಲ ಸೌಕರ್ಯ ಒದಗಿಸುವುದು. ಯುವಜನರಿಗೆ ಅನುಕೂಲವಾಗುವಂತೆ ಜಿಮ್, ಬಾಸ್ಕೆಟ್‌ಬಾಲ್ ಅಂಕಣ, ಪಾರ್ಕ್ ನಿರ್ಮಾಣ, ಕುಡಿಯುವ ನೀರಿನ ಸೌಕರ್ಯಗಳ ಅಭಿವೃದ್ಧಿಗೆ ಜೆಡಿಎಸ್ ಜತೆಗೂಡಿ ಅಗತ್ಯ ಕ್ರಮ ವಹಿಸುತ್ತೇನೆ ಎಂದು ತಿಳಿಸಿದರು.
ಏ.18ರಂದು ಶಿವಮೊಗ್ಗ ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್ ಗಣಪತಿ ದೇವಸ್ಥಾನದಲ್ಲಿ ಬೆಳಗ್ಗೆ 9.30ಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಲಿದ್ದು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ ಸೇರಿ ರಾಜ್ಯ ನಾಯಕರು ಭಾಗವಹಿಸಲಿದ್ದಾರೆ. ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆಶೀರ್ವಾದ ಮಾಡಬೇಕು ಎಂದರು.
ಸಿದ್ದರಾಮಯ್ಯ ಸರ್ಕಾರ ಬಡವರ ಜೇಬಿಗೆ ಕೈಹಾಕಿ ಹಣವನ್ನು ಕಿತ್ತು ವಾಪಸ್ ಕೊಡುತ್ತದೆಯೇ ಹೊರತು ಕೊಟ್ಟ ಭರವಸೆಯಂತೆ ನಡೆದುಕೊಳ್ಳುತ್ತಿಲ್ಲ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನೀಡುತ್ತಿರುವ 5 ಕೆ.ಜಿ. ಅಕ್ಕಿಗೆ ಕಾಂಗ್ರೆಸ್ ಭಾವಚಿತ್ರ ಹಾಕಿಕೊಂಡು ನಾವು ಕೊಡುತ್ತಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಜತೆಗೆ ಭಾರತ್ ಅಕ್ಕಿಯನ್ನೂ ತಡೆಹಿಡಿದಿದೆ ಎಂದರು.
ಜೆಡಿಎಸ್ ಪಕ್ಷದ ನಾಯಕಿ ಶಾರದಾ ಅಪ್ಪಾಜಿ ಮಾತನಾಡಿ, ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಕಾರ್ಯಕರ್ತರು ಮತ ಗಳಿಕೆ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ದೇಶದ ಭವಿಷ್ಯದ ದೃಷ್ಟಿಯಿಂದ ಬಿಜೆಪಿ ಜತೆ ಜೆಡಿಎಸ್ ವರಿಷ್ಠರು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಅಪ್ಪಾಜಿ ಗೌಡರಿಗೆ ಜನರೇ ಆಸ್ತಿಯಾಗಿದ್ದರು. ನಾವೆಲ್ಲರೂ ಸೇರಿ ರಾಘವೇಂದ್ರ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸೋಣ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ಚುನಾವಣಾ ಉಸ್ತುವಾರಿ ರಘುಪತಿ ಭಟ್, ಮುಖಂಡರಾದ ಎಂ.ಬಿ.ಭಾನುಪ್ರಕಾಶ್, ಮಂಜುಳಮ್ಮ, ಜಿ.ಧರ್ಮಪ್ರಸಾದ್, ಮಂಗೋಟೆ ರುದ್ರೇಶ್, ಆನಂದ್, ಕೂಡ್ಲಿಗೆರೆ ಹಾಲೇಶ್, ತೀರ್ಥಯ್ಯ, ರಾಜಶೇಖರ್, ಜ್ಯೋತಿಪ್ರಕಾಶ್, ಆರ್.ಕರುಣಾಮೂರ್ತಿ, ಸತೀಶ್‌ಗೌಡ, ಜಿ.ಪಿ.ಯೋಗೇಶ್, ಅಜಿತ್, ಗಿರೀಶ್ ಇದ್ದರು.