

ನವೀನ್ ಬಿಲ್ಗುಣಿ ಶಿವಮೊಗ್ಗ
ಕಳೆದ ವರ್ಷ ಬರಗಾಲದಿಂದ ರೈತರು ನಾನಾ ಸಂಕಷ್ಟ ಎದುರಿಸಿದ್ದರು. ಪ್ರಸಕ್ತ ಬಾರಿ ಉತ್ತಮ ಮಳೆಯಾಗಿರುವ ಕಾರಣ ಕೊಂಚ ನಿಟ್ಟುಸಿರು ಬಿಡುವಂತೆ ಆಗಿತ್ತು. ಆದರೆ ಇದೀಗ ಮಳೆ ಮತ್ತು ಬಿಸಿಲಿನ ಕಾರಣದಿಂದ ಭತ್ತಕ್ಕೆ ಕಂದು ಜಿಗಿ ಹುಳು ಬಾಧಿತವಾಗುತ್ತಿದೆ. ಒಂದಲ್ಲ, ಎರಡಲ್ಲ ಸಾವಿರಾರು ಹೆಕ್ಟೇರ್ ಪ್ರದೇಶವನ್ನು ಕೀಟ ಆವರಿಸಿದ್ದು ಮಲೆನಾಡಿನ ಅನ್ನದಾತರು ಅಕ್ಷರಶಃ ಕಂಗಾಲಾಗಿದ್ದಾರೆ.
ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 63,670 ಹೆಕ್ಟೇರ್‌ನಲ್ಲಿ ಭತ್ತ ನಾಟಿ ಮಾಡಲಾಗಿದೆ. ಕೆಲವೇ ದಿನಗಳಲ್ಲಿ ತೆನೆಗಟ್ಟಲಿದ್ದು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ಅನ್ನದಾತನಿಗೆ ಕಂದು ಜಿಗಿ ಹುಳು ತಣ್ಣೀರೆರಚುತ್ತಿದೆ. ಈಗಾಗಲೇ ಸಾವಿರಾರು ಹೆಕ್ಟೇರ್‌ಗೆ ವ್ಯಾಪ್ತಿಸಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಸ್ಥಿತಿ ರೈತರದ್ದಾಗಿದೆ.
ಸೊರಬ ತಾಲೂಕಿನಲ್ಲಿ ಗರಿಷ್ಠ 18,725 ಹೆಕ್ಟೇರ್, ಭದ್ರಾವತಿ ತಾಲೂಕಿನಲ್ಲಿ ಕನಿಷ್ಠ 5,020 ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗಿದೆ. ಉಳಿದಂತೆ ಸಾಗರ ತಾಲೂಕಿನಲ್ಲಿ 12,166, ಹೊಸನಗರದಲ್ಲಿ 7,696, ಶಿಕಾರಿಪುರದಲ್ಲಿ 7,500, ತೀರ್ಥಹಳ್ಳಿಯಲ್ಲಿ 6,418 ಮತ್ತು ಶಿವಮೊಗ್ಗದಲ್ಲಿ 6,145 ಹೆಕ್ಟೇರ್‌ನಲ್ಲಿ ಭತ್ತ ಬೆಳೆದಿದ್ದು, ಸೊರಬ, ಶಿವಮೊಗ್ಗ, ಹೊಸನಗರ, ತೀರ್ಥಹಳ್ಳಿ, ಶಿಕಾರಿಪುರ ಸೇರಿ ಜಿಲ್ಲೆಯ ಹಲವೆಡೆ ಕೀಟಬಾಧೆ ಅತಿ ವೇಗವಾಗಿ ವ್ಯಾಪಿಸುತ್ತಿದೆ.
ನೆರವಾಯ್ತು ಬಿರುಸು ಮಳೆ: ಈಗಾಗಲೇ ಕೃಷಿ ಇಲಾಖೆಯಿಂದ ರೈತರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ಆಗುತ್ತಿದೆ. ಕೀಟಬಾಧೆಯಿಂದ ಬೆಳೆಯನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂಬ ಮಾಹಿತಿ ನೀಡುತ್ತಿದ್ದಾರೆ. ಕೃಷಿ ಇಲಾಖೆ, ಕೃಷಿ ತಜ್ಞರ ಸಲಹೆ ಪಡೆದು ಔಷಧ ಸಿಂಪಡಣೆ ಮಾಡಿದರೂ ಕೀಟ ಬಾಧೆ ತಗ್ಗುತ್ತಿಲ್ಲ ಎಂಬ ಆತಂಕ ರೈತರನ್ನು ಕಾಡುತ್ತಿದೆ. ಬದಲಾಗಿ ದಿನದಿಂದ ದಿನಕ್ಕೆ ಅಕ್ಕಪಕ್ಕದ ಜಮೀನಿನಲ್ಲಿರುವ ಭತ್ತಕ್ಕೂ ವ್ಯಾಪಿಸುತ್ತಿದೆ. ಸಾವಿರಾರು ರೂ. ಖರ್ಚು ಮಾಡಿ ಕೀಟನಾಶಕ ಸಿಂಪಡಣೆ ಮಾಡಿದರೂ ಪ್ರಯೋಜನ ಆಗುತ್ತಿಲ್ಲ ಎಂಬುದು ರೈತರ ಕಳವಳಕ್ಕೆ ಕಾರಣವಾಗಿತ್ತು. ಇದೀಗ ಕಳೆದ ನಾಲ್ಕೈದು ದಿನಗಳಿಂದ ಬಿರುಸು ಮಳೆ ಕಂದುಜಿಗಿ ಹುಳು ಕಾಟಕ್ಕೆ ಕೊಂಚಕ್ಕೆ ಬ್ರೇಕ್ ಹಾಕಿದೆ.
ಬೆಳೆ ಸರ್ವನಾಶ: ಕಂದುಜಿಗಿ ಹುಳು ಲಕ್ಷಗಟ್ಟಲೆ ಸಂತನಾಭಿವೃದ್ಧಿ ಮಾಡುತ್ತಿದೆ. ಸಾಮಾನ್ಯವಾಗಿ ಕಂದುಜಿಗಿ ಹುಳು ಕಡಿಮೆ ಅವಧಿಯಲ್ಲಿ ತನ್ನ ಸಂಖ್ಯೆ ಹೆಚ್ಚಿಸಿಕೊಂಡು ಭತ್ತವನ್ನು ಸಂಪೂರ್ಣ ನಾಶ ಮಾಡುತ್ತಿವೆ. ಕಂದು ಜಿಗಿ ಹುಳುಗಳು ಭತ್ತದ ಬುಡದಲ್ಲಿ ರಸ ಹೀರುತ್ತಿವೆ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಭತ್ತ ಒಂದೆರಡು ದಿನಗಳಲ್ಲೇ ಬಿಳಿ ಬಣ್ಣಕ್ಕೆ ತಿರುಗುತ್ತದೆ. ಈ ನಡುವೆ ಮಳೆ ಮತ್ತು ಬಿಸಿಲಿನ ಕಣ್ಣಾಮುಚ್ಚಾಲೆ ಆಟದಿಂದ ಭತ್ತಕ್ಕೆ ಈ ಬಾರಿ ಕೀಟ ಬಾಧೆ ಶುರುವಾಗಿದೆ. ಪ್ರತಿ ಎಕರೆಗೆ 25ರಿಂದ 30 ಚೀಲ ಮೇಲ್ಪಟ್ಟು ಭತ್ತ ಬೆಳೆಯುತ್ತಿದ್ದ ರೈತರನ್ನು ಕೀಟ ಬಾಧೆ ಚಿಂತೆಗೆ ದೂಡಿದೆ. ಕೀಟ ಬಾಧೆ ನಿಯಂತ್ರಣಕ್ಕೆ ಬಾರದಿದ್ದರೆ ಪ್ರತಿ ಎಕರೆಗೆ ಕನಿಷ್ಠ 10 ಚೀಲ ಭತ್ತ ಬೆಳೆಯುವುದೂ ಕಷ್ಟವಾಗಲಿದೆ ಎನ್ನುವುದು ರೈತರ ಆತಂಕ.
ಹತೋಟಿ ಹೇಗೆ?
ಕೀಟಬಾಧೆ ಹತೋಟಿಗೆ ಪ್ರತಿ ಲೀ. ನೀರಿಗೆ ಟ್ರಿಫ್ಲುಮೆಜೋಪಿರಿನ್ (10 ಎಸ್‌ಸಿ) 0.5 ಮಿಲಿ ಅಥವಾ ಫ್ರೋನಿಕಾಮಿಡ್ (50 ಡಬ್ಲುೃಜಿ) 0.3 ಗ್ರಾಂ ಅಥವಾ ಕ್ಲೋಥಿಯಾನಿಡಿನ್ (50 ಡಬ್ಲುೃಡಿಜಿ) 0.1 ಗ್ರಾಂ, ಅಥವಾ ಪೈಮೆಟ್ರೋಜಿನ್ (50 ಡಬ್ಲುೃಜಿ) 0.6 ಗ್ರಾಂ ಅನ್ನು ಬೆರಸಿ ಗಿಡದ ಬುಡಭಾಗ ನೆನೆಯುವಂತೆ ಸಿಂಪಡಿಸಬೇಕು. ಒಮ್ಮೆ ಸಿಂಪಡಣೆ ಮಾಡಿದ 10ರಿಂದ 15 ದಿನಗಳ ಅಂತರದಲ್ಲಿ ಅಗತ್ಯವಿದ್ದರೆ ಮತ್ತೊಮ್ಮೆ ಔಷಧ ಸಿಂಪಡಣೆ ಮಾಡುವುದು. ತೆನೆ ಬರುವ ಮೊದಲು ಇದರ ಬಾಧೆ ಕಂಡುಬಂದಲ್ಲಿ ಎಕರೆಗೆ 5 ಕೆಜಿ ಫೋರೇಟ್ ಅನ್ನು ಮರಳಲ್ಲಿ ಮಿಶ್ರಣ ಮಾಡಿ ಗದ್ದೆಗೆ ಹಾಕುವ ಮೂಲಕ ಕೀಟಬಾಧೆ ತಡೆಯಬಹುದು ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.
ಒಮ್ಮೆ ಬಿಸಿಲು, ಮತ್ತೊಮ್ಮೆ ಮಳೆ ಇರುವ ಕಾರಣ ಭತ್ತಕ್ಕೆ ಕಂದುಜಿಗಿ ಹುಳು ಬಾಧೆ ಕಾಣಿಸಿಕೊಂಡಿದೆ. ಶಿವಮೊಗ್ಗ, ಸಾಗರ, ಹೊಸನಗರ ಭಾಗದಲ್ಲಿ ಸ್ವಲ್ಪ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಪ್ರಾರಂಭಿಕ ಹಂತದಲ್ಲಿರುವ ಕಾರಣ ತುಂಬಾ ಗಂಭೀರತೆ ಇಲ್ಲ. ಆದರೂ ಔಷಧ ಸಿಂಪಡಣೆ, ಗಾಳಿಯಾಡುವಿಕೆಗೆ ಅವಕಾಶ, ನೀರು ಬಿಸಿಯುವುದು ಸೇರಿ ಕೆಲವೊಂದು ಕ್ರಮಗಳನ್ನು ಅನುಸರಿಸುವ ಮೂಲಕ ಕೀಟ ನಿಯಂತ್ರಣ ಮಾಡಬಹುದು.-ಡಾ. ಎಂ.ಕಿರಣ್‌ಕುಮಾರ್, ಶಿವಮೊಗ್ಗ ಕೃಷಿ ಇಲಾಖೆ ಜಂಟಿ ನಿರ್ದೇಶಕ
ಕೃಷಿ ಇಲಾಖೆಯಿಂದ ಸಲಹೆಗಳು