ನಾಗರಬಾವಿಯಲ್ಲಿ ತಮ್ಮನಿಂದ ಅಣ್ಣಂದಿರ ಹತ್ಯೆ

Murder
Published on

ಬೆಂಗಳೂರು: ಮದ್ಯದ ಅಮಲಿನಲ್ಲಿ ಸಹೋದರರ ನಡುವೆ ನಡೆದ ಜಗಳದಲ್ಲಿ ಅಣ್ಣಂದಿರಿಬ್ಬರನ್ನು ಕೊಂದು ತಮ್ಮ ಪರಾರಿಯಾಗಿದ್ದಾನೆ.

ಕಲ್ಯಾಣನಗರದ ಸಹದೇವ (29) ಮತ್ತು ದಂಡಪಾಣಿ (27) ಮೃತರು. ನಾಗರಬಾವಿ ಮುಖ್ಯರಸ್ತೆಯಲ್ಲಿನ ನಿರ್ಮಾಣ ಹಂತದ ವಾಣಿಜ್ಯ ಕಟ್ಟಡದಲ್ಲಿ ಮಂಗಳವಾರ ಕೃತ್ಯ ಬೆಳಕಿಗೆ ಬಂದಿದೆ. ಮೃತರ ಕಿರಿಯ ಸಹೋದರ ರಾಜೇಶ್ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಕಲ್ಯಾಣನಗರದ ಶಾಂತಮ್ಮ ಅವರಿಗೆ ರಾಜೇಶ, ಸಹದೇವ ಮತ್ತು ದಂಡಪಾಣಿ ಸೇರಿ ಐವರು ಮಕ್ಕಳು. ಈ ಪೈಕಿ ಸಹದೇವ, ದಂಡಪಾಣಿ ಮತ್ತು ರಾಜೇಶ್ ಮದ್ಯ ಮತ್ತು ಮಾದಕ ವ್ಯಸನಿಗಳು. ಗಾರೆ ಕೆಲಸ ಮಾಡಿಕೊಂಡಿದ್ದ ಮೂವರೂ ಮದ್ಯ ಸೇವಿಸಿ ಎಲ್ಲೆಂದರಲ್ಲೇ ಮಲಗುತ್ತಿದ್ದರು.

5 ವರ್ಷಗಳ ಹಿಂದೆಯೇ ಮನೆ ತೊರೆದಿದ್ದ ಸಹೋದರರು ಎಲ್ಲಿಯೂ ಸ್ಥಿರವಾಗಿ ಇರುತ್ತಿರಲಿಲ್ಲ. 2 ದಿನಗಳ ಹಿಂದೆ ನಾಗರಬಾವಿ ಮುಖ್ಯರಸ್ತೆಯ ನಮ್ಮೂರ ತಿಂಡಿ ಹೋಟೆಲ್ ಬಳಿ ನಿರ್ಮಾಣ ಹಂತದ ಕಟ್ಟಡಕ್ಕೆ ಸಹೋದರರು ತೆರಳಿದ್ದರು. ಅಲ್ಲಿ ಕಂಠಮಟ್ಟ ಮದ್ಯ ಸೇವಿಸಿದ ಬಳಿಕ ಕ್ಷುಲ್ಲಕ ಕಾರಣಕ್ಕೆ ಸಹೋದರರ ನಡುವೆ ಜಗಳವಾಗಿದೆ. ಮಾತಿಗೆ ಮಾತು ಬೆಳೆದು ರಾಜೇಶ್, ತನ್ನ ಅಣ್ಣಂದಿರ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿ ಹತ್ಯೆ ಮಾಡಿದ್ದಾನೆ.

ತನ್ನ ತಾಯಿಗೆ ಸೋಮವಾರ ರಾತ್ರಿ ಕರೆ ಮಾಡಿದ ರಾಜೇಶ್, ನಾಗರಬಾವಿ ಮುಖ್ಯರಸ್ತೆಯ ನಿರ್ಮಾಣ ಹಂತದ ವಾಣಿಜ್ಯ ಕಟ್ಟಡದಲ್ಲಿ ಕುಡಿದು ಸಹದೇವ ಮತ್ತು ದಂಡಪಾಣಿ ಗಲಾಟೆ ಮಾಡಿಕೊಳ್ಳುತ್ತಿದ್ದರು. ಅವರಿಬ್ಬರೂ ಸತ್ತಿರಬಹುದು ಎಂದು ಹೇಳಿ ಫೋನ್ ಕರೆ ಸ್ಥಗಿತಗೊಳಿಸಿದ್ದ. ಅದರಿಂದ ಆತಂಕಗೊಂಡ ಶಾಂತಮ್ಮ ಮತ್ತು ಸಂಬಂಧಿಕರು ಘಟನಾ ಸ್ಥಳಕ್ಕೆ ಹೋಗಿದ್ದರು. ಆದರೆ, ಕತ್ತಲಾದ ಕಾರಣ ವಾಪಸ್ ಬಂದಿದ್ದರು. ಮಂಗಳವಾರ ಬೆಳಗ್ಗೆ ತೆರಳಿ ನೋಡಿದಾಗ ಶವಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಅನ್ನಪೂರ್ಣೆಶ್ವರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net