

ಬ್ಯಾಡಗಿ: 22 ವರ್ಷ ವಯಸ್ಸಿನ ತಮ್ಮನನ್ನು ಅಣ್ಣನೇ ಕೊಡಲಿಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಬುಡಪನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ನಾಗರಾಜ ಗುಡ್ಡಪ್ಪ ಗೊರವರ (22) ಮೃತಪಟ್ಟವ. ಈತನ ತಮ್ಮ ದಿಳ್ಳೆಪ್ಪ (20) ಆರೋಪಿ. ಮಂಗಳವಾರ ತಡರಾತ್ರಿ ನಾಗರಾಜ ಕೊಲೆಯಾಗಿದ್ದು, ಭಯಾನಕ ಘಟನೆ ಕಂಡು ಬುಡಪನಹಳ್ಳಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಹೋದರನನ್ನೇ ಕೊಲ್ಲುವ ಮಟ್ಟಕ್ಕೆ ಹೋಗಿದ್ದು ಏಕೆಂದು ಆರೋಪಿ ಪೊಲೀಸರ ಬಳಿ ಬಾಯ್ಬಿಟ್ಟಿದ್ದಾನೆ.
ನಾಗರಾಜ ಮದ್ಯವ್ಯಸನಿಯಾಗಿದ್ದ. ನಿತ್ಯ ಮದ್ಯ ಸೇವಿಸಿ ಮನೆಗೆ ಬರುತ್ತಿದ್ದ ಆತ ಅಪ್ಪ-ಅಮ್ಮ ಹಾಗೂ ಕುಟುಂಬದವರಿಗೆ ಅವಾಚ್ಯವಾಗಿ ನಿಂದಿಸಿ ಹಿಂಸೆ ಕೊಡುತ್ತಿದ್ದ. ಜಗಳ ಮಾಡುತ್ತಿದ್ದ. ಸಾಕಷ್ಟು ಬಾರಿ ಮನೆಯವರು ಆತನಿಗೆ ಬುದ್ಧಿ ಹೇಳಿದರೂ ಕೇಳಿರಲಿಲ್ಲ.
ಮಂಗಳವಾರವೂ ಕುಡಿದು ಬಂದ ನಾಗರಾಜ ತಂದೆ-ತಾಯಿಗೆ ಬೈಯ್ಯುತ್ತ ಹಲ್ಲೆಗೆ ಯತ್ನಿಸಿದ್ದ. ಅಣ್ಣನ ವರ್ತನೆಗೆ ಬೇಸತ್ತ ಸಹೋದರ ದಿಳ್ಳೆಪ್ಪ, ಮನೆಯಲ್ಲಿದ್ದ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.