

ಇಡೀ ವಿಶ್ವ ಕರೊನಾ ವಿರುದ್ಧ ಹೋರಾಡುತ್ತಿದೆ. ಸದ್ಯ ಜಗತ್ತಿನ ಮಂತ್ರ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಸಾಧ್ಯವಾದಷ್ಟು ಮನೆಯಲ್ಲೇ ಇರಿ...
ಆದರೆ ಮಾಸ್ಕ್ ಧರಿಸಿಕೊಂಡೇ ಇರುವುದು ಅಷ್ಟು ಸುಲಭವಲ್ಲ. ಏನಾದರೂ ತಿನ್ನುವಾಗಲಾದರೂ ಅದನ್ನು ಕೈಯಿಂದ ಮುಟ್ಟಿ ತೆಗೆಯಲೇಬೇಕು.
ಆದರೆ ಬ್ರಿಟಿಷ್ ರೂಪದರ್ಶಿ ಎಮ್ಮಾ ಲೂಯಿಸ್ ಕನ್ನೊಲಿ ಅವರು ಮಾಸ್ಕ್ನ್ನು ಕೈಯಿಂದ ತೆಗೆಯದೆ, ತಿಂಡಿ ತಿನ್ನುವುದು ಹೇಗೆಂದು ತೋರಿಸಿಕೊಟ್ಟಿದ್ದಾರೆ. ವಿಡಿಯೋ ನೋಡಿದ ಅವರ ಅಭಿಮಾನಿಗಳು, ನೆಟ್ಟಿಗರು ಹುಬ್ಬು ಮೇಲೇರಿಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಒಂದು ಸಣ್ಣ ವಿಡಿಯೋವನ್ನು ಎಮ್ಮಾ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅವರು ಅದೇನನ್ನೋ ಬಾಯಿಗೆ ಹಾಕಿಕೊಳ್ಳುತ್ತಾರೆ. ಆದರೆ ತಾವು ಧರಿಸಿದ್ದ ಮಾಸ್ಕ್ನ್ನು ತೆಗೆಯುವುದಿಲ್ಲ. ತೆಗೆಯುವುದು ಬಿಡಿ ಅದನ್ನು ಮುಟ್ಟುವುದೂ ಇಲ್ಲ.
ಅದು ತುಂಬ ಸಿಂಪಲ್ ವಿಧಾನ. ಎಮ್ಮಾ ಲೂಯಿಸ್ ಎರಡು ಮಾಸ್ಕ್ಗಳನ್ನು ಧರಿಸಿದ್ದಾರೆ. ಪೊಂದು ಮಾಸ್ಕ್ ಅವರ ಮೂಗಿನ ಮೇಲೆ ಇದ್ದರೆ, ಇನ್ನೊಂದು ಅವರ ಗಲ್ಲದ ಮೇಲಿದೆ. ಇದೆರಡೂ ಮಾಸ್ಕ್ಗಳು ಅರ್ಧ ಭಾಗ ಬಾಯಿಯನ್ನು ಮುಚ್ಚಿವೆ. ಸುಮ್ಮನೆ ಬಾಯಿ ತೆರೆದರೆ ಸಾಕು ಮಾಸ್ಕ್ಗಳು ಸರಿಯುತ್ತವೆ. ಆಗ ಸುಲಭವಾಗಿ ಬೇಕಾಗಿದ್ದನ್ನು ತಿನ್ನಬಹುದು. ವಿಡಿಯೋ ಶೇರ್ ಮಾಡಿದ ರೂಪದರ್ಶಿ, ಮನಸಿದ್ದಲ್ಲಿ ಮಾರ್ಗ ಎಂದು ಕ್ಯಾಪ್ಷನ್ ಬರೆದಿದ್ದಾರೆ.
ವಿಡಿಯೋ ಫನ್ನಿಯಾಗಿ ಇದ್ದು, ಈಗಾಗಲೇ ಮೂರು ಲಕ್ಷಕ್ಕೂ ಅಧಿಕ ವೀವ್ಸ್ ಬಂದಿದೆ. ಈ ವಿಧಾನವನ್ನು ನೆಟ್ಟಿಗರು ಮೆಚ್ಚಿಕೊಂಡು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು, ನಮಗೆ ನಗು ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್)