

ಲಂಡನ್: ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಕೊನೆಗೂ ಅಧಿಕೃತವಾಗಿ ಹೊರಬಂದಿದೆ. ಹೊಸ ವರ್ಷದಂದೇ ಈ ಐತಿಹಾಸಿಕ ನಿರ್ಧಾರ ಜಾರಿಗೆ ಬಂದಿದೆ. ಐರೋಪ್ಯ ಒಕ್ಕೂಟದಿಂದ ಹೊರ ಬರುವ ಕುರಿತ ಆರ್ಥಿಕ ಒಪ್ಪಂದಕ್ಕೆ ಬ್ರಿಟನ್ ಪ್ರಧಾನಿ ಬೊರೀಸ್ ಜಾನ್ಸನ್ ಸಹಿ ಹಾಕಿದ್ದಾರೆ. ಈ ಒಪ್ಪಂದಕ್ಕೆ ಬ್ರಿಟನ್ ಸಂಸತ್ನ ಬಹುತೇಕ ಪ್ರತಿನಿಧಿಗಳು ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಪ್ರತಿಪಕ್ಷದ ಕೆಲ ಸಂಸದರ ವಿರೋಧ ನಡುವೆ ಈ ಐತಿಹಾಸಿಕ ನಿರ್ಧಾರಕ್ಕೆ ಬ್ರಿಟನ್ ಸಂಸತ್ ಇತ್ತೀಚೆಗೆ ಒಪ್ಪಿಗೆ ನೀಡಿತ್ತು. ಐರೋಪ್ಯ ಒಕ್ಕೂಟದ ಇತರ ರಾಷ್ಟ್ರಗಳು ಕೂಡ ಸುದೀರ್ಘ ಪರಾಮರ್ಶೆ ಬಳಿಕ ಅಂತಿಮ ಒಪ್ಪಂದಕ್ಕೆ ಸಹಮತ ವ್ಯಕ್ತಪಡಿಸಿವೆ.
4 ವರ್ಷದ ಬಳಿಕ ಜಾರಿ: ಐರೋಪ್ಯ ಒಕ್ಕೂಟದಿಂದ ಹೊರಬರಲು ಬ್ರಿಟನ್ 2016ರಲ್ಲೇ ನಿರ್ಧಾರ ಮಾಡಿತ್ತು. ಈ ಕುರಿತು ಜನಮತ ಗಣನೆ ನಡೆಸಲಾಗಿತ್ತು. ಸಣ್ಣ ಮತದ ಅಂತರದಲ್ಲಿ ಬ್ರೆಕ್ಸಿಟ್ಗೆ ಗೆಲುವಾಗಿತ್ತು. 2018ರ ಮಾರ್ಚ್ ಅಂತ್ಯಕ್ಕೆ ಬ್ರೆಕ್ಸಿಟ್ ಜಾರಿಗೆ ತರಲು ಗಡುವು ನಿಗದಿಯಾಗಿತ್ತು. ಆದರೆ ಸಮರ್ಪಕ ಕಾನೂನು ರಚನೆ ಹಾಗೂ ಆರ್ಥಿಕ ನೀತಿ ರಚನೆಯಲ್ಲಿ ಭಿನ್ನಮತ ಎದುರಾದ ಕಾರಣ ಈ ದಿನಾಂಕವನ್ನು ಮತ್ತಷ್ಟು ವಿಸ್ತರಣೆ ಮಾಡಲಾಗಿತ್ತು. 2020 ಡಿಸೆಂಬರ್ 31ಕ್ಕೆ ಕೊನೆಯ ಗಡುವು ನಿಗದಿ ಮಾಡಲಾಗಿತ್ತು.
ಬ್ರೆಕ್ಸಿಟ್ ಯಾಕೆ?
ಐರೋಪ್ಯ ಒಕ್ಕೂಟದ 28 ರಾಷ್ಟ್ರಗಳು ಅಲ್ಲಿನ ಆರ್ಥಿಕತೆ, ಸಾಮಾಜಿಕ ಕ್ಷೇತ್ರದಲ್ಲಿ ಸಮಾನ ಸ್ಥಾನ ಪಡೆದಿವೆ. ಒಕ್ಕೂಟದ ಸದಸ್ಯತ್ವ ಇನ್ನಿತರ ಕಾರಣಕ್ಕೆ ಬ್ರಿಟನ್ ವಾರ್ಷಿಕ ಸಾವಿರಾರು ಕೋಟಿ ಪೌಂಡ್ಗಳನ್ನು ವೆಚ್ಚ ಮಾಡುತ್ತಿತ್ತು. ಆದರೆ ಇತರ ಸಣ್ಣ ರಾಷ್ಟ್ರಗಳು ಇದರ ಪ್ರಯೋಜನ ಪಡೆಯುತ್ತಿದ್ದವು. ಇದರಿಂದ ಬ್ರಿಟನ್ಗೆ ಆರ್ಥಿಕ ನಷ್ಟ ಉಂಟಾಗುತ್ತಿತ್ತು. ಜತೆಗೆ ಬ್ರಿಟನ್ ಆರ್ಥಿಕ ನೀತಿ, ಆಡಳಿತದ ಮೇಲೂ ಒಕ್ಕೂಟದ ಹಿಡಿತ ಇತ್ತು. ಅದರ ನಿಯಮಗಳಿಗೆ ಅನುಗುಣವಾಗಿ ನೀತಿಗಳನ್ನು ರೂಪಿಸಬೇಕಿತ್ತು. ಈ ಹಿನ್ನೆಲೆಯಲ್ಲಿ ಒಕ್ಕೂಟದಿಂದ ಹೊರಗೆ ಬರಲು ಬ್ರಿಟನ್ನಲ್ಲಿ ಒತ್ತಾಯ ಆರಂಭವಾಗಿತ್ತ್ತು.
ಫಲ ನೀಡಿದ ಜಾನ್ಸನ್ ಯತ್ನ
ಡೇವಿಡ್ ಕೆಮರೂನ್ ಪ್ರಧಾನಿಯಾಗಿದ್ದ ವೇಳೆ ಬ್ರೆಕ್ಸಿಟ್ ಜನಮತ ಗಣನೆ ನಡೆದಿತ್ತು. ಅವರು ಬ್ರೆಕ್ಸಿಟ್ ವಿರುದ್ಧವಾಗಿದ್ದರು. ಆದರೆ ಫಲಿತಾಂಶ ಬ್ರೆಕ್ಸಿಟ್ ಪರವಾಗಿ ಬಂದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಬೇಕಾಯಿತು. ಬಳಿಕ ಅಧಿಕಾರಕ್ಕೆ ಬಂದ ಥೆರೆಸಾ ಮೇ ಸ್ವಪಕ್ಷೀಯರ ವಿರೋಧ ಎದುರಿಸಬೇಕಾಯಿತು. ಬ್ರೆಕ್ಸಿಟ್ಗೆ ಸಂಬಂಧಿಸಿದ ಒಪ್ಪಂದದ ಕರಡನ್ನು ಸಂಸತ್ನಲ್ಲಿ ಅಂಗೀಕರಿಸುವಲ್ಲಿ ಅವರು ಹಲವು ಬಾರಿ ವಿಫಲರಾದರು. ಬಳಿಕ ರಾಜೀನಾಮೆ ನೀಡಿದರು. ನಂತರ ಅಧಿಕಾರಕ್ಕೆ ಬಂದ ಬೋರಿಸ್ ಜಾನ್ಸನ್ ಬ್ರೆಕ್ಸಿಟ್ ಇದನ್ನು ಜಾರಿಗೆ ತರುವಲ್ಲಿ ಯಶಸ್ವಿಯಾದರು.
ಭಾರತಕ್ಕೆ ಲಾಭವೇನು?
ಪ್ರಮುಖ ಘಟನಾವಳಿ