ಜೀತ ವಿಮುಕ್ತರನನು ಸಮಾಜದ ಮುಖ್ಯವಾಹಿನಿಗೆ ತನ್ನಿ

26M.D.R.2
ಮದ್ದೂರಿನ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ನನ್ನ ಗುರುತಿನ ಯೋಜನೆಯಡಿ ಜೀತ ವಿಮುಕ್ತ ಫಲಾನುಭವಿಗಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ನಡೆದ ಅಧಿಕಾರಿಗಳ ಮತ್ತು ಗ್ರಾಪಂ ಪಿಡಿಒಗಳ ಸಭೆ ವೇಳೆ ತಾಪಂ ಇಒ ರಾಮಲಿಂಗಯ್ಯ ಮಾತನಾಡಿದರು. ಬೋರೇಗೌಡ, ಬಸವರಾಜು, ಕೆ.ಎಂ.ರೇಖಾ, ಪ್ರತಿಭಾ, ಟಿ.ವಿ.ಮಂಜುನಾಥ್, ಶಿವಣ್ಣ ಇದ್ದರು.
Published on

ಮದ್ದೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವಾರು ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಜೀತವಿಮುಕ್ತರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕೆಂದು ಜಿಲ್ಲಾ ಜೀತಮುಕ್ತ ನಿಗಮದ ವ್ಯವಸ್ಥಾಪಕ ಬೋರೇಗೌಡ ತಿಳಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ನನ್ನ ಗುರುತಿನ ಯೋಜನೆಯಡಿ ಜೀತ ವಿಮುಕ್ತ ಫಲಾನುಭವಿಗಳಿಗೆ ಸರ್ಕಾರದಿಂದ ಸಿಗುವ ಎಲ್ಲ ಸವಲತ್ತುಗಳನ್ನು ಒಂದೇ ಸೂರಿನಡಿ ದೊರಕಿಸಿಕೊಡುವ ಬಗ್ಗೆ ನಡೆದ ಪಿ.ಡಿ.ಒ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಸಮಾಜ ಆಧುನಿಕ ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದುವರೆದಿದ್ದರೂ ಕೆಲ ಗ್ರಾಮಗಳಲ್ಲಿ ಇನ್ನೂ ಜೀತಮುಕ್ತ ಪದ್ಧತಿ ಜಾರಿಯಲ್ಲಿರುವುದು ಆತಂಕಕಾರಿ ವಿಚಾರವಾಗಿದೆ. ಇದರ ನಿರ್ಮೂಲನೆಗಾಗಿ ಸರ್ಕಾರ ಕೋಟ್ಯಂತರ ರೂ. ವೆಚ್ಚ ಮಾಡುತ್ತಿದ್ದು ಜೀತ ವಿಮುಕ್ತಿ ಹೊಂದಿರುವ ವ್ಯಕ್ತಿಗಳಿಗೆ ಹಲವಾರು ಸೌಲಭ್ಯಗಳನ್ನು ಒದಗಿಸುತ್ತಿದ್ದು ಪ್ರತಿಯೊಬ್ಬ ಫಲಾನುಭವಿಗೂ ಸಕಾಲದಲ್ಲಿ ದೊರೆಯಲು ಅಧಿಕಾರಿಗಳು ಮುಂದಾಗಬೇಕೆಂದರು.

ಹಲವು ಫಲಾನುಭವಿಗಳು ಸ್ವಉದ್ಯೋಗಗಳನ್ನು ಕಂಡುಕೊಳ್ಳಲು ಆಸಕ್ತರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು ಹೈನುಗಾರಿಕೆ, ಕುರಿ ಸಾಕಾಣಿಕೆ, ಹೋಟೆಲ್, ಪ್ರಾವಿಜನ್ ಸ್ಟೋರ್, ಮೇಕೆ ಇನ್ನಿತರ ಉದ್ಯೋಗಗಳನ್ನು ಮಾಡಲು ಅವಕಾಶವಿದ್ದು ಇಂತಹ ಫಲಾನುಭವಿಗಳು ಅರ್ಜಿ ಸಲ್ಲಿಸಿ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಉಳುಮೆಯನ್ನು ಹೊರತುಪಡಿಸಿ ಆರ್ಥಿಕ ಚಟುವಟಿಕೆಗೆ ಅನುಸಾರ ಗ್ರಾಮ-1 ಸೇವಾ ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿರುವ ಜತೆಗೆ ಎರಡು ಎಕರೆ ಜಮೀನು ಹೊಂದಿರುವವರಿಗೆ ಗಂಗಾಕಲ್ಯಾಣ ಯೋಜನೆಯಡಿ ಉಚಿತವಾಗಿ ಕೊಳವೆಬಾವಿ ಕೊರೆಸಿ ಅಗತ್ಯ ಪರಿಕರಗಳನ್ನು ಒದಗಿಸಿ ವಿದ್ಯುತ್ ಸಂಪರ್ಕ ಸೌಲಭ್ಯವನ್ನು ಕಲ್ಪಿಸಲು ಅವಕಾಶವಿರುವುದಾಗಿ ಹೇಳಿದರು.

ಜೀತ ವಿಮುಕ್ತರಿಗೆ ಸರ್ಕಾರದಿಂದ ಸಿಗುವ ಪ್ರತಿಯೊಂದು ಯೋಜನೆಗಳು ಸಮರ್ಪಕವಾಗಿ ದೊರಕಲು ಅಧಿಕಾರಿಗಳು ಮುಂದಾಗುವ ಜತೆಗೆ ಪುನರ್ವಸತಿ, ಶಿಕ್ಷಣ, ವೈದ್ಯಕೀಯ ಸೌಲಭ್ಯ ಇನ್ನಿತರ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಿ ಜಾಗೃತಿ ಮೂಡಿಸುವಂತಹ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಬೇಕೆಂದರು.

ತಾಪಂ ಇಒ ರಾಮಲಿಂಗಯ್ಯ ಮಾತನಾಡಿ, ತಾಲೂಕಿನಲ್ಲಿರುವ ಜೀತ ವಿಮುಕ್ತರಿಗೆ ಹಲವಾರು ಸೌಲಭ್ಯಗಳನ್ನು ಕಲ್ಪಿಸಿ ಸ್ವಾವಲಂಬಿ ಬದುಕನ್ನು ಕಂಡುಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು ಗ್ರಾಪಂ ಪಿಡಿಒಗಳು ಹಲವು ಕಾರ್ಯಕ್ರಮಗಳ ಸಂಬಂಧ ಅಭಿಯಾನಗಳನ್ನು ಆಯೋಜಿಸಿ ತ್ವರಿತಗತಿಯಲ್ಲಿ ಸರ್ಕಾರದ ಸೌಲಭ್ಯ ದೊರೆಯಲು ಮುಂದಾಗಬೇಕೆಂದರು.

ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಟಿ.ವಿ.ಮಂಜುನಾಥ್, ಕೃಷಿ ಸಹಾಯಕ ನಿರ್ದೇಶಕಿ ಪ್ರತಿಭಾ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ರೇಖಾ, ಜಿ.ವಿ.ಕೆ ಜಿಲ್ಲಾ ಕಾರ್ಯದರ್ಶಿ ಬಸವರಾಜು, ಮುತ್ತಣ್ಣ ಹಾಗೂ ಪಿಡಿಒಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net