

ಕೋಲಾರ: ನಗರ ಹೊರವಲಯದ ಅಂತರಗಂಗಾ ಬುದ್ಧಿಮಾಂಧ್ಯ ಶಾಲೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವಿಣ್ ಪಿ.ಬಾಗೇವಾಡಿ ಅವರು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಮಕ್ಕಳೊಂದಿಗೆ ಚರ್ಚಿಸಿದ ಅವರು, ಅಡುಗೆ ಮನೆ, ಶೌಚಗೃಹ, ವಸತಿ ಕೊಠಡಿ, ಕಂಪ್ಯೂಟರ್ ಕೊಠಡಿ, ಫಿಜಿಯೋಥೆರಫಿ ಚಿಕಿತ್ಸಾ ಕೊಠಡಿ ವೀಸಿದರು. ಅಂಗವೈಕಲ್ಯ ಮಕ್ಕಳ ಆರೋಗ್ಯಕ್ಕೆ ತಕ್ಕ ವಾತಾವರಣ ನಿರ್ಮಾಣ ಮಾಡಬೇಕು ಎಂದು ಶಾಲೆಯ ಅಧಿಕಾರಿ, ಸಿಬ್ಬಂದಿಗೆ ಸಿಇಒ ಸೂಚಿಸಿದರು.
ಆವರಣದಲ್ಲಿನ ಕಸದ ರಾಶಿ ಕಂಡು ಕೂಡಲೇ ಅದನ್ನು ತೆರವುಗಿಳಿಸಿ, ಮಕ್ಕಳು ಇರುವ ಕಡೆ ಗಡಿ&ಮರಗಳನ್ನು ಬೆಳೆಸಿ, ಸ್ವಚ್ಛವಾಗಿಟ್ಟುಕೊಳ್ಳಬೇಕು. ಕೇವಲ ಕಟ್ಟಡ ನಿರ್ಮಾಣ ಮಾಡಿದರೆ, ಬೋರ್ಡ್ ಹಾಕಿದರೆ ಏನು ಪ್ರಯೋಜನ..?, ಮಕ್ಕಳನ್ನು ಸೂಕ್ಷ$್ಮತೆಯಿಂದ ಪೋಷಣೆ ಮಾಡಿ, ಸಮಾಜದ ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ ಆಗಬೇಕು. ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸಮರ್ಪಕವಾಗಿ ಪಡೆದುಕೊಂಡು ಅದರ ಪ್ರಯೋಜನ ಮಕ್ಕಳಿಗೆ ಕಲ್ಪಿಸಬೇಕು ಎಂದರು.
ಶಾಲೆಯ ಸಂಸ್ಥಾಪಕ ಅಧ್ಯಕ್ಷ ಶಂಕರ್ ಮಾತನಾಡಿ, ಶಾಲೆಯಲ್ಲಿ 64 ಮಕ್ಕಳು, ವೃದ್ಧರು ವಾಸವಿದ್ದು, ಹಾರೈಕೆ ಸಮರ್ಪಕವಾಗಿ ನಡೆಯುತ್ತಿದೆ. ಪ್ರತಿ ದಿನ ಆಹಾರ, ಬಟ್ಟೆ ಸ್ವಚ್ಛತೆ ಮಾಡಲಾಗುತ್ತಿದೆ. ಮಕ್ಕಳಿಗೆ ತರಗತಿ ನಡೆಸುವುದರ ಜತೆಗೆ ಕಂಪ್ಯೂಟರ್ ಕಲಿಸಲಾಗುತ್ತಿದೆ. ಶಾಲೆಯಿಂದ ಇಬ್ಬರನ್ನು ಎಂಎಎಸ್ ರಾಮಯ್ಯ ಸಂಸ್ಥೆಯವರು ಕೆಲಸಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಶಾಲೆಯಲ್ಲಿ ವಾಸವಿರುವ ಮಕ್ಕಳಿಗೆ ತಿಂಗಳಿಗೆ ತಲಾ 10 ಸಾವಿರ ರೂ. ಸರ್ಕಾರದಿಂದ ದೊರೆಯುತ್ತಿದೆ, ಜತೆಗೆ ದಾನಿಗಳು ಕಟ್ಟಡಗಳನ್ನು ಕಟ್ಟಿಸಿಕೊಟ್ಟಿದ್ದು, ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಮಂಜುಳಾ, ಶಾಲೆಯ ಮುಖ್ಯಶಿಕ್ಷಕಿ ಪ್ರಜ್ಞಾ ಇದ್ದರು.