ತಕ್ಷಣ ಸುಗ್ರೀವಾಜ್ಞೆ ತನ್ನಿ, ಅಲ್ಲಿವರೆಗೂ ನೇಮಕ ಪ್ರಕ್ರಿಯೆ ನಿಲ್ಲಿಸಿ

Vidhanasoudha
Published on

ಬೆಂಗಳೂರು: ಒಳ ಮೀಸಲು ವಿಚಾರವಾಗಿ ಸುಪ್ರಿಂಕೋರ್ಟ್ ತೀರ್ಪು ನೀಡಿದ್ದು ಮೂವತ್ತು ವರ್ಷದ ಹೋರಾಟಕ್ಕೆ ಸಂದ ಜಯ. ಇದೀಗ ಕೂಡಲೇ ಸಂಪುಟ ಸಭೆ ನಡೆಸಿ ಸುಗ್ರೀವಾಜ್ಞೆ ಜಾರಿ ಮಾಡಬೇಕು, ಒಳ ಮೀಸಲು ಅನುಷ್ಠಾನ ಆಗುವವರೆಗೂ ತನ್ನೆಲ್ಲ ನೇಮಕ ಪ್ರಕ್ರಿಯೆಗೆ ತಡೆ ಹಾಕಬೇಕು ಎಂದು ಸಚಿವರು ಹಾಗೂ ಮಾದಿಗ ಸಮಾಜದ ಮುಖಂಡರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ವಿಧಾನಸೌಧದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ಮಾಜಿ ಸಚಿವ ಎಚ್.ಆಂಜನೇಯ, ಎಲ್.ಹನುಮಂತಯ್ಯ ಹಾಗೂ ಇತರರು, ಒಳಮೀಸಲಾತಿ ಕುರಿತು ಸರ್ವೋಚ್ಛ ನ್ಯಾಯಾಲಯದಿಂದ ಐತಿಹಾಸಿಕ ತೀರ್ಪು. ಅದನ್ನು ತಡೆ ಮಾಡದೇ ಜಾರಿ ಮಾಡಬೇಕು ಎಂಬುದು ನಮ್ಮ ಆಗ್ರಹ ಎಂದು ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿದರು.

ಕೆ.ಎಚ್.ಮುನಿಯಪ್ಪ ಮಾತನಾಡಿ, ಪರಿಶಿಷ್ಟ ಜಾತಿ, ಶೋಷಿತ ಸಮುದಾಯಗಳು ಮೀಸಲಾತಿ ಪ್ರಯೋಜನದಿಂದ ಮೀಸಲಾತಿ ಇರುವ ಜಾತಿಗಳಲ್ಲಿ ಅಸಮಾನತೆಗೆ ಒಳಗಾದವರಿಗೆ ಸಮಾನತೆ ಸಿಗಬೇಕೆಂದರೆ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಬೇಕು ಎನ್ನುವ ಮೂರು ದಶಕಗಳ ಬೇಡಿಕೆಗೆ ಸರ್ವೋಚ್ಛ ನ್ಯಾಯಾಲಯದ ಏಳು ನ್ಯಾಯಾಧೀಶರ ಸಂವಿಧಾನ ಪೀಠ ಈ ಸಮುದಾಯಗಳಿಗೆ ನ್ಯಾಯ ದೊರಕಿಸುವ ಮಹತ್ವದ ತೀರ್ಪನ್ನು ನೀಡಿದೆ ಎಂದರು.

ಪರಿಶಿಷ್ಟ ಜಾತಿಗಳು ಏಕರೂಪಿ ಸಮುದಾಯ ಅಲ್ಲ ಎಂದು ಐತಿಹಾಸಿಕ ಹಾಗೂ ಅನುಭವಕ್ಕೆ ಸಾಕ್ಷ್ಯ ಹೇಳುತ್ತವೆ. ಹೀಗಾಗಿ ರಾಜ್ಯಗಳು ಸಂವಿಧಾನದ 15(4), 16(4)ನೇಯ ವಿಧಿಯಡಿಯಲ್ಲಿ ಅಧಿಕಾರವನ್ನು ಬಳಸಿ, ರಾಜ್ಯಗಳು ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸಬಹುದು ಎಂದು ನೀಡಿರುವ ತೀರ್ಪು ನಮ್ಮ ತಳಸಮುದಾಯದ ಹಲವು ವರ್ಷಗಳ ಬೇಡಿಕೆಗೆ ನ್ಯಾಯ ಸಿಕ್ಕಿದೆ ಎಂದು ಹೇಳಿದರು.

ಈ ನಿರ್ಣಯದಲ್ಲಿ ಸರ್ವೋಚ್ಛ ನ್ಯಾಯಾಲಯವು ಹಿಂದುಳಿದ ವರ್ಗಗಳಿಗೆ ಸಮಾನ ಪ್ರಾತಿನಿಧ್ಯ ಹಾಗೂ ಅವಕಾಶ ಒದಗಿಸಲು ಒಳ ಮೀಸಲಾತಿಯ ಅವಶ್ಯಕತೆಯನ್ನು ಎತ್ತಿಹಿಡಿದಿದೆ. ಮತ್ತು ಸುಪ್ರೀಂ ಕೋರ್ಟಿನ ಈ ತೀರ್ಪಿನಿಂದಾಗಿ ಒಳಮೀಸಲಾತಿ ಅನುಷ್ಠಾನಕ್ಕೆ ಹಿಂದಿನ ಇ.ವಿ. ಚಿನ್ನಯ್ಯ ನಿರ್ಣಯದಿಂದ ಉಂಟಾದ ತೊಡಕು ನಿವಾರಣೆಯಾಗಿದೆ ಎಂದು ವಿವರಿಸಿದರು.

2023ನೇ ಸಾರ್ವತ್ರಿಕ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ತನ್ನ ಪ್ರಾಣಾಳಿಕೆಯಲ್ಲಿ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೆ ತರಲು ಭರವಸೆ ನೀಡಲಾಗಿತ್ತು. ಅದರಂತೆ, ಭರವಸೆ ಈಡೇರಿಸಬೇಕೆಂದು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರನ್ನು ಒತ್ತಾಯಿಸಲಾಗಿದೆ ಎಂದು ಹೇಳಿದರು.

ಒಳಮೀಸಲಾತಿ ಕಲ್ಪಿಸುವ ಕುರಿತು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ಶಿಫಾರಸ್ಸುಗಳನ್ನು ಕೂಲಂಕಷವಾಗಿ ಅಧ್ಯಯನ ನಡೆಸಿ, ಇತ್ತೀಚಿನ ಬೆಳವಣಿಗೆಗಳನ್ನು ಪರಿಗಣನೆಗೆ ತೆಗೆದುಕೊಂಡು ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಕುರಿತು ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ, ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆಂದರು.

ಕೋಟ್...

ಕೆಪಿಎಸ್ಸಿ ಸೇರಿದಂತೆ ಸರ್ಕಾರದ ಎಲ್ಲ ನೇಮಕ ಪ್ರಕ್ರಿಯೆ ತಕ್ಷಣವೇ ನಿಲ್ಲಿಸಬೇಕು. ಒಳ ಮೀಸಲು ಅನುಷ್ಠಾನವಾದ ಬಳಿಕವಷ್ಟೇ ಪ್ರಕ್ರಿಯೆ ಮುಂದುವರಿಸಬೇಕು. ಎಸ್ಸಿಪಿ ಟಿಎಸ್ಪಿ ಅನುದಾನ ಹಂಚಿಕೆಯಲ್ಲೂ ಇದೇ ಕ್ರಮಕೈಗೊಳ್ಳಬೇಕು.

- ಎಚ್.ಆಂಜನೇಯ, ಮಾಜಿ ಸಚಿವ

ಹೋರಾಟದ ಫಲವಾಗಿ ಇಂದು ಮಹತ್ವದ ತೀರ್ಮಾನ ಹೊರಬಂದಿದೆ. ಸುಪ್ರೀಂ ಆದೇಶವನ್ನು ಜಾರಿಗೊಳಿಸಲು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸಿದ್ಧರಿದ್ದಾರೆ. ಕಟ್ಟಕಡೆಯ ಜಾತಿಯವರಿಗೂ ಅನುಕೂಲವಾಗುವ ವಿಶ್ವಾಸವಿದೆ.

- ಆರ್.ಬಿ.ತಿಮ್ಮಾಪುರ, ಅಬಕಾರಿ ಸಚಿವ

ಬಾಕ್ಸ್...

ಹಿಂದಿನ ಸರ್ಕಾರದ

ತೀರ್ಮಾನ ಮುಂದುವರಿಯಲಿ

ನ್ಯಾ.ಸದಾಶಿವ ಆಯೋಗದ ವರದಿ ಜಾರಿಯಾಗಬೇಕು, ಈ ನಿಟ್ಟಿನಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಂಪುಟ ಉಪ ಸಮಿತಿ ಕೈಗೊಂಡ ಶಿಾರಸಿನಂತೆ ಸರ್ಕಾರ ನಿರ್ಣಯ ಕೈಗೊಂಡಿತ್ತು. ಅದೇ ಪ್ರಕಾರ ಮುಂದುವರಿಯಬೇಕೆಂಬುದು ನಮ್ಮ ಒತ್ತಾಯ ಎಂದು ಸುದ್ದಿಗೋಷ್ಠಿಯಲ್ಲಿದ್ದವರು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net