

ಇಂಧೋರ್: ಆಕೆ ವಧು. ತನ್ನ ಮದುವೆಗೆ ಕೆಲವೇ ಹೊತ್ತು ಇರುವಾಗ ಅಲಂಕಾರ ಮಾಡಿಸಿಕೊಳ್ಳಲು ಬ್ಯೂಟಿ ಪಾರ್ಲರ್ಗೆ ಹೋಗಿದ್ದಳು. ಆದರೆ ಮುಂದಾಗಿದ್ದು ಬಹುದೊಡ್ಡ ದುರಂತ.
ಮಧ್ಯಪ್ರದೇಶದ ರತ್ಲಂ ಜಿಲ್ಲೆಯ ಜೌರಾ ಪಟ್ಟಣದಲ್ಲಿ ಘಟನೆ ನಡೆದಿದೆ. ವಧು ಮೇಕಪ್ ಮಾಡಿಸಿಕೊಳ್ಳಲು ತಮ್ಮ ಮನೆಯ ಸಮೀಪದ ಬ್ಯೂಟಿ ಪಾರ್ಲರ್ಗೆ ತೆರಳಿದ್ದಾಗ, ಆಕೆಯ ಕತ್ತು ಕೊಯ್ದು ಹತ್ಯೆ ಮಾಡಲಾಗಿದೆ. ಯುವತಿಯ ಮಾಜಿ ಲವರ್ನ ಕೆಲಸ ಇದು ಎಂದು ಪೊಲೀಸರು ಹೇಳಿದ್ದಾರೆ. ಅಲ್ಲದೆ ಆತ ಯುವತಿಯನ್ನು ಹತ್ಯೆ ಮಾಡಿ, ರಾಜಸ್ಥಾನಕ್ಕೆ ಪರಾರಿಯಾಗಿದ್ದಾನೆ. ಆರೋಪಿಗೆ ಸಹಾಯ ಮಾಡಿದ ಅವನ ಗೆಳೆಯನನ್ನು ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ.
ಕೊಲೆಯಾದ ಯುವತಿಯನ್ನು ಸೋನು ಯಾದವ್ ಎಂದು ಗುರುತಿಸಲಾಗಿದೆ. ಈಕೆ ಶಾಜಾಪುರದ ನಿವಾಸಿ. ಸೋನುಗೆ ಇದು ಎರಡನೇ ಮದುವೆ. ವಿವಾಹ ಕಾರ್ಯಕ್ರಮ ನಡೆಯುವ ದಿನದ ಬೆಳಗ್ಗೆ ಜೌರಾ ಪಟ್ಟಣಕ್ಕೆ, ಕುಟುಂಬದವರೊಂದಿಗೆ ಆಗಮಿಸಿದ್ದಳು.
ನಂತರ ಮೇಕಪ್ ಮಾಡಿಸಿಕೊಳ್ಳಲು ಹತ್ತಿರದ ಬ್ಯೂಟಿ ಪಾರ್ಲರ್ಗೆ ತನ್ನ ಕಸಿನ್ ಜತೆ ಹೋಗಿದ್ದಳು. ಅಲ್ಲಿ ಆಕೆಗೆ ಒಂದೇ ಸಮ ಫೋನ್ ಬರಲು ಶುರುವಾಯಿತು. ಅದು ರಾಮ್ ಯಾದವ್ ಎಂಬುವನದ್ದು. ಈತನೇ ಆಕೆಯ ಮಾಜಿ ಲವರ್ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಸೋನು ಆ ಕರೆಯನ್ನು ಸ್ವೀಕರಿಸದೆ ನಿರ್ಲಕ್ಷಿಸಿದ್ದಳು. ಆದರೆ ಅಷ್ಟಕ್ಕೇ ಸುಮ್ಮನಾಗದ ಆತ, ಸ್ಥಳಕ್ಕೇ ಬಂದು ವಧುವಿನ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ. ಇದನ್ನೂ ಓದಿ: ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಆತ್ಮಹತ್ಯೆಗೆ ಶರಣಾದ ಗುರುರಾಘವೇಂದ್ರ ಸಹಕಾರ ಬ್ಯಾಂಕ್ನ ಮಾಜಿ ಸಿಇಒ
ಅವನ ಸಹಚರನೋರ್ವನನ್ನು ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಸೋನು ಯಾದವ್ ಹಾಗೂ ರಾಮ್ ಯಾದವ್ ನಡುವೆ ಅಫೇರ್ ಇತ್ತು ಎಂಬುದನ್ನು ಆತ ಪೊಲೀಸರಿಗೆ ತಿಳಿಸಿದ್ದಾನೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಆರೋಪಿಯ ಪತ್ತೆ ಕಾರ್ಯ ನಡೆಸುತ್ತಿದ್ದಾರೆ. (ಏಜೆನ್ಸೀಸ್)