

ಬರೇಲಿ: ಮದುವೆಯಾದ ಮೂರೇ ತಿಂಗಳಿಗೆ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಬರೇಲಿ ಬಳಿ ನಡೆದಿದೆ.
ಸುಭಾಷ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿವಾಹವಾಗಿದ್ದ ಸೀತಾಪುರ ನಿವಾಸಿ ಜ್ಯೋತಿ (23) ಮೃತಪಟ್ಟ ಯುವತಿಯಾಗಿದ್ದು, ಮಗಳ ಮುಖ ನೋಡಲು ಪೋಷಕರು ಬಂದಾಗ ಗಂಡನ ಮನೆಯವರು ಶವವನ್ನು ಬಿಟ್ಟು ಓಡಿ ಹೋಗಿದ್ದಾರೆ. ಘಟನೆ ಸಂಬಂಧಿಸಿದಂತೆ ಯುವತಿಯ ತಂದೆ ಅವಧೇಶ್ ಪಾಂಡೆ, ಎಂಟು ಜನರ ವಿರುದ್ಧ ವರದಕ್ಷಿಣೆ ಸಲುವಾಗಿ ತನ್ನ ಮಗಳನ್ನು ಹತ್ಯೆಗೈಯ್ಯಲಾಗಿದೆ ಎಂದು ದೂರು ನೀಡಿದ್ದಾರೆ. ಮೂರು ತಿಂಗಳ ಹಿಂದೆ ಜ್ಯೋತಿ ಮತ್ತು ರವೀಂದ್ರ ಶುಕ್ಲಾ ಮದುವೆ ನೆರವೇರಿತ್ತು. ರವೀಂದ್ರ ಶುಕ್ಲಾ ಬದೌನ್‌ನಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿದ್ದು, ಈತನ ಮನೆಯವರು ವರದಕ್ಷಿಣೆಯಾಗಿ ಕಾರು, ಎಸಿ ಕೇಳಿದ್ದರು. ಕೊನೆಗೆ ಬೇಸತ್ತ ಯುವತಿ ತಂದೆ ಆಕೆಯನ್ನು ತಮ್ಮ ಮನೆಗೆ ಕರೆತಂದಿದ್ದರು.
ಇದನ್ನೂ ಓದಿ: ವಿಳಾಸ ಕೇಳಿದ್ದೇ ಈ ಬಡಪಾಯಿಯ ತಪ್ಪು?: ಡೆಲಿವರಿ ಬಾಯ್ ಮೇಲೆ ಹಲ್ಲೆ ನಡೆಸಿದ ಮಹಿಳೆ
ಇದಾದ ಬಳಿಕ ಕಳೆದ ಸೋಮವಾರದಂದು ಗಂಡನ ಕುಟುಂಬಸ್ಥರು ಯುವತಿಯನ್ನು ಗಂಡನ ಮನೆಗೆ ಕರೆದೊಯ್ದಿದ್ದರು. ಅದೇ ದಿನ ಯುವತಿಯು ತನ್ನ ತಂದೆಗೆ ಕರೆ ಮಾಡಿ, ಗಂಡನ ಮನೆಯವರು ತನ್ನನ್ನು ಸಾಯಿಸುತ್ತಾರೆ ಎಂದು ಹೇಳಿದ್ದಳು. ಆ ಬಳಿಕ ಆಕೆಯ ತಂದೆ ಮರುದಿನ ಮಂಗಳವಾರದಂದು ಕರೆ ಮಾಡಿದ್ದು, ಆಕೆ ಕರೆ ಸ್ವೀಕರಿಸಿರಲಿಲ್ಲ. ಆದರೆ ಬೆಳಿಗ್ಗೆ ಆಕೆಯ ಅತ್ತೆ ಕರೆ ಮಾಡಿ ಮಗಳು ಸತ್ತಿರುವ ವಿಷಯ ತಿಳಿಸಿದ್ದಾಳೆ.
ಕೂಡಲೇ ಮಗಳನ್ನು ನೋಡಲು ತಂದೆ ಹೋಗಿದ್ದು, ಈ ವೇಳೆ ಮಾವ, ಅತ್ತೆ, ಗಂಡ ಮತ್ತಿತರು ಮನೆಯಿಂದ ಎಸ್ಕೇಪ್ ಆಗಿದ್ದಾರೆ. ಕೊನೆಗೆ ಆಕೆಯ ತಂದೆ ದೂರು ನೀಡಿದ್ದಾರೆ. ಮೃತ ಯುವತಿಯ ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಬುಧವಾರದ ಮರಣೋತ್ತರ ಪರೀಕ್ಷೆ ನಂತರವೇ ಎಲ್ಲವೂ ಗೊತ್ತಾಗಲಿದೆ.(ಏಜೆನ್ಸೀಸ್)